ಲಾಯ್ಲ ಗ್ರಾ.ಪಂ.ಗೆ ಡಿವೈಎಸ್ಪಿ ಭಾಸ್ಕರ್ ರೈ ಭೇಟಿ: ತನಿಖೆ
ಅಗ್ನಿ ಆಕಸ್ಮಿಕದಿಂದ ಕಡತ ನಾಶ ಪ್ರಕರಣ

ಬೆಳ್ತಂಗಡಿ, ಜು.14: ಲಾಯ್ಲ ಗ್ರಾಮ ಪಂಚಾಯತ್‌ನಲ್ಲಿ ಎರಡು ತಿಂಗಳ ಹಿಂದೆ ರಾತ್ರಿಯ ವೇಳೆ ಬೆಂಕಿ ಬಿದ್ದು ಸಾಕಷ್ಟು ಕಡತಗಳು ಸುಟ್ಟು ನಾಶವಾದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಗುರುವಾರ ಬಂಟ್ವಾಳ ಡಿವೈಎಸ್ಪಿ ಭಾಸ್ಕರ ರೈ ನೇತೃತ್ವದಲ್ಲಿ ಪೊಲೀಸರು ಲಾಯ್ಲ ಗ್ರಾಮ ಪಂಚಾಯತ್‌ಗೆ ಆಗಮಿಸಿ ತನಿಖೆ ನಡೆಸಿದರು.
ಗುರುವಾರ ಸುಳ್ಯದಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ನಾಗರಾಜ್ ಎಸ್. ಲಾಯ್ಲ, ಗ್ರಾಮ ಪಂಚಾಯತ್‌ನಲ್ಲಿ ಆಗುತ್ತಿರುವ ಅವ್ಯವಹಾರಗಳ ಬಗ್ಗೆ ಗಮನಸೆಳೆದು ಅದನ್ನು ಮುಚ್ಚಿಹಾಕಲು ಬೆಂಕಿ ಆಕಸ್ಮಿಕ ಸೃಷ್ಟಿಸಲಾಗಿದೆ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯಂತೆ ಗುರುವಾರ ಸಂಜೆ ಪೊಲೀಸ್ ಅಧಿಕಾರಿಗಳು ಲಾಯ್ಲಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್‌ನಲ್ಲಿನ ದಾಖಲೆಗಳನ್ನು ಪರಿಶೀಲಿಸಿದರು. ಬೆಂಕಿಯಿಂದಾಗಿ ಸುಟ್ಟಿರುವ ಕಡತಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಅರ್ಧ ಸುಟ್ಟು ಹೋಗಿರುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು. ಹಾಗೂ ಗ್ರಾಮ ಪಂಚಾಯತು ಅಧಿಕಾರಿಗಳ ಹಾಗೂ ಸಾರ್ವಜನಿಕರಿಂದ ಮಾಹಿತಿಗಳನ್ನು ಪಡೆದುಕೊಂಡರು.
ಹಲವಾರು ಅನುಮಾನಗಳಿಗೆ ಕಾರಣವಾಗಿದ್ದ ಈ ಪ್ರಕರಣದ ತನಿಖೆಗೆ ಇದೀಗ ಮರು ಜೀವ ಬಂದಿದೆ. ಲೆಕ್ಕ ಪರಿಶೋಧನೆಯ ಹಿಂದಿನ ದಿನ ನಡೆದಿದ್ದ ಈ ಬೆಂಕಿ ಆಕಸ್ಮಿಕದ ಹಿನ್ನೆಲೆ ಹೊರಬರಲಿದೆಯೇ ಎಂದು ನಾಗರಿಕರು ಕುತೂಹಲದಿಂದ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೆಳ್ತಂಗಡಿ ಎಸ್ಸೈ ಸಂದೇಶ್ ಹಾಗೂ ಇತರ ಅಧಿಕಾರಿಗಳು ಇದ್ದರು.







