ಜೀತಪದ್ಧತಿ: ಸಮೀಕ್ಷೆಗೆ ಡಿಸಿ ಸೂಚನೆ
ಮಂಗಳೂರು, ಜು.14: ಜೀತಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜೀತಪದ್ಧತಿ ನಿರ್ಮೂಲನೆ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯಲ್ಲಿ ಮಾತನಾಡಿದರು. ಜೀತಗಾರಿಕೆ ಪದ್ಧತಿ ನಿರ್ಮೂಲನೆ ಕಾಯ್ದೆಯಡಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಹಾಗೂ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮಂಗಳೂರು ಹಾಗೂ ಪುತ್ತೂರು ಉಪವಿಭಾಗ ಮಟ್ಟದ ಸಮಿತಿ ರಚಿಸಲಾಗಿದೆ. ಸರಕಾರೇತರ ಸಂಘ ಸಂಸ್ಥೆಗಳಿಗೆ ಹಾಗೂ ಸಮಾಜ ಸೇವಕರಿಗೆ ಈ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ತರಬೇತಿಯನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಕಾರ್ಮಿಕ ಇಲಾಖೆಗೆ ಸೂಚಿಸಿದರು.
ಜೀತಪದ್ಧತಿಯಲ್ಲಿರುವವರನ್ನು ಪತ್ತೆಹಚ್ಚಿ, ಅವರಿಗೆ ಸೂಕ್ತ ಪುನರ್ವಸತಿ ಹಾಗೂ ಪರಿಹಾರ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲು ಅವರು ತಿಳಿಸಿದರು. ಜೀತಪದ್ಧತಿಯು ಅಮಾನವೀಯವಾಗಿದ್ದು, ಇದನ್ನು ತಡೆಯಲು ಎಲ್ಲರೂ ಸಹಕಾರ ನೀಡಬೇಕು. ಜೀತಗಾರಿಕೆ ಬಗ್ಗೆ ಎಲ್ಲಾ ಸಂಬಂಧಪಟ್ಟವರಿಗೂ ಕಾಯ್ದೆಯ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಜೀತಪದ್ಧತಿಯಲ್ಲಿ ತೊಡಗಿಕೊಂಡಿದ್ದ ಫಲಾನುಭವಿಗಳಿಗೆ 1ಲಕ್ಷ ರೂ.ವರೆಗೆ ಪುನರ್ವಸತಿ ಪ್ಯಾಕೇಜ್ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೇದಮೂರ್ತಿ, ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.







