ಕಾರ್ಕಳ: ವಿದ್ಯಾರ್ಥಿವೇತನ, ಪುಸ್ತಕ ಹಾಗೂ ಸಮವಸ್ತ್ರ ವಿತರಣೆ

ಕಾರ್ಕಳ, ಜು.14: ವಿಶ್ವ ರೋಟರಿ ಕ್ಲಬ್‌ನ ಈ ವರ್ಷದ ಆಶಯವಾದ ರೋಟರಿ ಸರ್ವಿಂಗ್ ಹ್ಯುಮ್ಯಾನಿಟಿ ಎಂಬ ಮಾತನ್ನು ನಿಟ್ಟೆ ರೋಟರಿ ಕ್ಲಬ್ ವಿಭಾಗವು ಸಾಕಾರಗೊಳಿಸಿದ್ದು, ಸಂಸ್ಥೆಯು ಬಡವಿದ್ಯಾರ್ಥಿಗಳಿಗೆ ಹಾಗೂ ಅಂಗವೈಕಲ್ಯತೆ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಎಂದು ಇನ್ಸ್ಟಲೇಶನ್ ಆಫೀಸರ್ ಪಿ.ಎಚ್. ಅಭಿನಂದನ್ ಶೆಟ್ಟಿ ಹೇಳಿದ್ದಾರೆ.
ಗುರುವಾರ ನಿಟ್ಟೆಯಲ್ಲಿ ನಡೆದ ನಿಟ್ಟೆ ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ವಿಶ್ವದಲ್ಲೇ ರೋಟರಿ ಸಂಸ್ಥೆಯು ಉನ್ನತ ಮಟ್ಟದ ಕೆಲಸ ಮಾಡುತ್ತಿದ್ದು ಬಡತನ, ಆರೋಗ್ಯ, ನೈರ್ಮಲ್ಯದ ಕಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದರು.
ರೋಟರಿ ಕ್ಲಬ್ 3182ನ ಅಸಿಸ್ಟೆಂಟ್ ಗವರ್ನರ್ ಗುರುರಾಜ್ ಮಾತನಾಡಿ, ಸಮಾಜಕ್ಕಾಗಿ ಕೆಲಸ ಮಾಡುವುದರಿಂದ ಸಮಾಜದ ಬೆಳವಣಿಗೆಯೊಂದಿಗೆ ಮಾನಸಿಕ ನೆಮ್ಮದಿ ಲಭಿಸುತ್ತದೆ. ಸಮಾಜಾಭಿವೃದ್ಧಿ ಪರವಾದ ಕೆಲಸಗಳಿಗೆ ರೊಟೇರಿಯನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತನು, ಮನ, ಧನ ಸಹಾಯದಲ್ಲಿ ತೊಡಗಬೇಕಿದೆ ಎಂದರು.
ನಿಟ್ಟೆ ರೋಟರಿ ಕ್ಲಬ್‌ನ ವತಿಯಿಂದ 5 ಶಾಲೆಗಳ 50 ವಿದ್ಯಾರ್ಥಿಗಳಿಗೆ ಸಮವಸ್ತ್ರ, 8 ಶಾಲೆಗಳ 750 ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೋಲಿಯೋ ಪೀಡಿತ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ರಾಜ್ಯಮಟ್ಟದಲ್ಲಿ ಪಿಯುಸಿಯಲ್ಲಿ ದ್ವಿತೀಯ ಸ್ಥಾನ ಪಡೆದ ಕಾರ್ಕಳದ ವಿದ್ಯಾರ್ಥಿಯನ್ನು ಗುರುತಿಸಿ ಗೌರವಿಸಲಾಯಿತು.
ನಿಟ್ಟೆ ರೋಟರಿ ಕ್ಲಬ್‌ನ 2016-2017ನೆ ಸಾಲಿನ ಅಧ್ಯಕ್ಷರಾಗಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಐ.ಆರ್.ಮಿತ್ತಂತಾಯ, ಕಾರ್ಯದರ್ಶಿಯಾಗಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲಕ ಶೇಖರ್ ಪೂಜಾರಿ ಪ್ರಮಾಣ ವಚನ ಸ್ವೀಕರಿಸಿದರು.
ರೊಟೇರಿಯನ್ ಎಂ. ಪಡಿವಾಳ್ ಉಪಸ್ಥಿತರಿದ್ದರು. ಆರ್.ಐ 3182 ನ ವಿವಿಧ ಶಾಖೆಗಳಿಂದ ಸುಮಾರು 200 ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಟ್ಟೆ ರೋಟರಿ ಕ್ಲಬ್‌ಗೆ ಸುರೇಶ್, ಕೃಷ್ಣಪ್ರಸಾದ್, ಡಾ.ಡಿ.ಕೆ. ಶ್ರೀಕಾಂತ್, ಶಶಾಂಕ್ ಶೆಟ್ಟಿ, ಕೃಷ್ಣರಾಜ ಜೋಯಿಸ ಹಾಗೂ ಪುನೀತ್ ಆರ್.ಪಿ ಸೇರಿದಂತೆ ಆರು ಮಂದಿ ನೂತನ ಸದಸ್ಯತ್ವದ ಪ್ರಮಾಣವಚನ ಸ್ವಿಕರಿಸಿದರು.
ಮಾಜಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಸ್ವಾಗತಿಸಿದರು. 2015-2016ನೆ ಸಾಲಿನ ಕಾರ್ಯದರ್ಶಿ ಡಾ.ಶಶಿಕಾಂತ್ ಕರಿಂಕ ವಾರ್ಷಿಕ ವರದಿ ವಾಚಿಸಿದರು. ಶೇಖರ್ ಪೂಜಾರಿ ವಂದಿಸಿದರು.







