ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುವ ಅವಕಾಶ
ದ.ಕ.: ಜು.22ರಿಂದ ಲೋಕಾಯುಕ್ತ ಅಧಿಕಾರಿಗಳ ಪ್ರವಾಸ
![ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುವ ಅವಕಾಶ ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುವ ಅವಕಾಶ](https://www.varthabharati.in/sites/default/files/images/articles/2016/07/14/karnataka-lokayukta_4.jpg)
ಮಂಗಳೂರು, ಜು.14: ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಜುಲೈ 22, 26 ಹಾಗೂ 29ರಂದು ಜಿಲ್ಲೆಯ ವಿವಿಧೆಡೆ ತೆರಳಿ, ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲು/ದೂರುಗಳನ್ನು ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಲಾಗುವುದು. ಭರ್ತಿ ಮಾಡಿ, ನೋಟರಿಯಿಂದ ಅಫಿದವಿತ್ ಮಾಡಿಸಿದ ಸದ್ರಿ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದು. ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ದೂರುಗಳನ್ನು ಅಲ್ಲಿಯೇ ಇತ್ಯರ್ಥಪಡಿಸಲಾಗುವುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.
ಜು.22ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಮೂಡುಬಿದಿರೆ ವಿಶೇಷ ತಹಶೀಲ್ದಾರರ ಕಚೇರಿ, ಜು.26ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಚೇರಿ, ಅಂದು ಮಧ್ಯಾಹ್ನ 3 ರಿಂದ ಸಂಜೆ 4:30ರವರೆಗೆ ಸರಕಾರಿ ಅತಿಥಿ ಗೃಹ(ಐ.ಬಿ.), ಬಂಟ್ವಾಳ, ಜು. 29ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಸುಳ್ಯ ತಹಶೀಲ್ದಾರರ ಕಚೇರಿ, ಅಂದು ಮಧ್ಯಾಹ್ನ 3 ರಿಂದ ಸಂಜೆ 4-30 ಗಂಟೆಯವರೆಗೆ ಪುತ್ತೂರು ತಾಲೂಕು ಕಚೇರಿ. ಇದಲ್ಲದೇ ಉಳಿದ ದಿನಗಳಲ್ಲೂ ಕಚೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು, ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ.
ಅನಾಮಧೇಯ ಅರ್ಜಿಗಳು ಬಂದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅರ್ಜಿದಾರರು ನಮೂನೆ 1 ಮತ್ತು 2ರಲ್ಲಿ ಭರ್ತಿ ಮಾಡಿ ನೋಟರಿಯಿಂದ ಅಫಿದಾವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಈ ಕಚೇರಿಗೆ ಅಥವಾ ನೇರವಾಗಿ ಮಾನ್ಯ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.