ಅವೈಜ್ಞಾನಿಕ ಕಾಮಗಾರಿ ವಿರುದ್ಧ ಕ್ರಮಕೆ್ಕ ಆಗ್ರಹಿಸಿ ಡಿಸಿಗೆ ಮನವಿ

ಕಾರವಾರ, ಜು.14: ತಾಲೂಕಿನ ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ ಬಳಿಯ ಗುಡ್ಡದಡಿಯಿಂದ ಸಾರ್ವಜನಿಕರು ಸಂಚಾರ ಮಾಡಬೇಕಾದರೆ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಸಾಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕೈಗೆತ್ತಿಕೊಂಡಿರುವ ಐಆರ್‌ಬಿ ಕಂಪೆನಿಯವರ ನಿರ್ಲಕ್ಷದಿಂದ ಈ ರೀತಿಯಾಗುತ್ತಿದ್ದು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಗುರುವಾರ ನಗರಸಭೆ ಸದಸ್ಯರ ನಿಯೋಗ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಭೇಟಿ ಮಾಡಿ ಐಆರ್‌ಬಿ ಕಂಪೆನಿ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿದ್ದರಿಂದ ಗುಡ್ಡದ ಮೇಲಿನ ಕಲ್ಲುಗಳು ಉರುಳುತ್ತಿವೆ. ಈಗಾಗಲೇ ಇದರಿಂದ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.
ಕಾರವಾರ ಮತ್ತು ಸದಾಶಿವಗಡದಿಂದ ಪಕ್ಕದ ಗೋವಾ ರಾಜ್ಯಕ್ಕೆ ಸಾಗಬೇಕು ಎಂದರೆ ಇದೇ ಮಾರ್ಗದಿಂದ ಸಾಗಬೇಕು. ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ಐಆರ್‌ಬಿ ಕಂಪೆನಿ ಸದಾಶಿಗಡದ ಗುಡ್ಡವನ್ನು ನೆಲಸಮ ಮಾಡಲು ಸ್ಫೋಟಕಗಳನ್ನು ಬಳಸುತ್ತಿದೆ. ಇದರಿಂದಾಗಿ ಗುಡ್ಡದ ಕಲ್ಲುಗಳು ಸಡಿಲಗೊಂಡು ಹೆದ್ದಾರಿ ಮೇಲೆ ಉರುಳುತ್ತಿವೆ. ಇದರಿಂದ ಜನರು ತೊಂದರೆಪಡುವಂತಾಗಿದೆ. ಮುಂದೆ ನಡೆಯುವಂತಹ ನರಬಲಿಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಸಂಚರಿಸಬೇಕಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಮೌನವಾಗಿದೆ ಎಂದು ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡು ಐಆರ್‌ಬಿ ಕಂಪೆನಿಗೆ ಸೂಕ್ತ ರೀತಿಯ ಸುರಕ್ಷಾ ನೀತಿಯನ್ನು ಅನುಸರಿಸಬೇಕು ಎಂದು ಸೂಚನೆ ನೀಡಬೇಕು ಎಂದು ಕೋರಿದೆ.
ನಗರಸಭೆ ಸದಸ್ಯರ ಅಹವಾಲನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಈಗಾಗಲೇ ಈ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಅಗತ್ಯಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.
ನಿಯೋಗದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯರಾದ ನಿತಿನ್ ಪಿಕಳೆ, ಗಣಪತಿ ಉಳ್ವೇಕರ್, ಸಂತೋಷ್ ನಾಯ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.







