ಎಲ್ಲರಿಗೂ ನ್ಯಾಯ ಒದಗಿಸುವುದು ನನ್ನ ಕರ್ತವ್ಯ: ಡಿಸಿ ಸತ್ಯವತಿ
ಪ್ರತೀ ವಾರ ಕುಂದು ಕೊರತೆ ಆಲಿಸಲು ಕ್ರಮ

ಮೂಡಿಗೆರೆ, ಜು.14: ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ನಗರಕ್ಕೆ ಭೇಟಿ ನೀಡಿದ ಸತ್ಯವತಿಯವರು ಇಂದು ನಗರದ ವಿವಿಧ ಖಾಸಗಿ ಕಾಮಗಾರಿ ಮತ್ತು ಕಟ್ಟಡಗಳ ನಿರ್ಮಾಣ ಪ್ರದೇಶಗಳಿಗೆ ತೆರಳಿ ಸ್ಥಳ ವೀಕ್ಷಣೆ ಮಾಡಿ ಅಧಿಕಾರಿಗಳ ಬೆವರಿಳಿಸಿದರು. ನಂತರ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿ, ಎಲ್ಲರೂ ಕಾನೂನಿಗೆ ಬೆಲೆ ನೀಡಿ, ಎಲ್ಲರಿಗೂ ನ್ಯಾಯ ಒದಗಿಸುವುದೇ ನನ್ನ ಕರ್ತವ್ಯ. ಪ್ರತೀ ತಾಲೂಕಿನ ಕುಂದು ಕೊರತೆ ಆಲಿಸಲು ಪ್ರತೀ ವಾರಕ್ಕೆ ಒಂದು ಬಾರಿ ಜಿಲ್ಲೆಯಿಂದ ಉಪವಿಭಾಗಾಧಿಕಾರಿ ಇಲ್ಲವೇ ಅದೇ ರ್ಯಾಂಕ್‌ನ ಅಧಿಕಾರಿಗಳನ್ನು ತಾಲೂಕಿನ ಸಾಮಾನ್ಯ ಜನರ ಕುಂದು ಕೊರತೆ ಆಲಿಸಲು ನೇಮಿಸಲಾಗುವುದು. ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದ್ದು ಚುನಾವಣೆ ಸಂದರ್ಭ ಆಡಳಿತ ಯಂತ್ರವೇ ಕುಸಿದು ಹೋಗುತ್ತದೆ. ಆದರೂ ಕೆಲಸದಲ್ಲಿ ಕಳ್ಳಾಟ ಆಡದಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು ಎಂದರು. ಒಂದು ಲಕ್ಷ ನೀಡಿದವರಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದೆ ಎಂಬ ಆಪಾದನೆಗಳಿವೆ. ಅಲ್ಲದೆ, ಈ ಭಾಗದಲ್ಲಿ ಸಾಕಷ್ಟು ಅಕ್ರಮ ಕಟ್ಟಡಗಳು ಕಟ್ಟಲ್ಪಟ್ಟಿದ್ದು, ನಂತರ ಸಕ್ರಮಕ್ಕಾಗಿ ಅರ್ಜಿ ಹಾಕಿದ್ದಾರೆ, ಮೊದಲೇ ಅನುಮತಿ ಪಡೆದುಕೊಳ್ಳಿ. ನಮ್ಮ ಇಲಾಖೆಯ ಸಂಪೂರ್ಣ ಸಹಕಾರ ಇದೆ. ಅದು ಬಿಟ್ಟು ಮೊದಲೆ ಅಕ್ರಮ ಮಾಡಿ ಸಕ್ರಮಕ್ಕೆ ಅರ್ಜಿ ಹಾಕಿದಲ್ಲಿ ಅನುಮತಿ ನೀಡುವುದಿಲ್ಲ. ಈ ಸಂಬಂಧ ಪ್ರವಾಸಿ ಮಂದಿರ ಮತ್ತು ತಾಲೂಕು ಕಚೇರಿಗೆ ಭೇಟಿ ನೀಡಿದ ಇವರು ನಂತರ ವಿವಿಧ ಇಲಾಖೆಗಳ ಕಡತಗಳನ್ನು ಪರಿಶೀಲಿಸಿದರು. ಕಟ್ಟಡ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದ ತತ್ಕೋಳ ರಸ್ತೆಯಲ್ಲಿ ಇರುವ ಹಮ್ಮಬ್ಬ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಾಸದ ಮನೆಗಳ ನಿರ್ಮಾಣಕ್ಕಾಗಿ ಪ್ರಮಾಣ ಪತ್ರ ಪಡೆದು ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿರುವುದನ್ನು ಕಂಡು ಕೋಪದಿಂದ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡುವವರೆಗೆ ಏನು ಮಾಡುತ್ತಿದ್ದೀರಿ, ಸಂಪೂರ್ಣ ಕಾನೂನು ಮುರಿದು ಕಟ್ಟಡ ಕಟ್ಟಲಾಗಿದೆ, ಒಬ್ಬರಿಗೂ ಜವಾಬ್ದಾರಿ ಇಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜೆಎಂ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಕಲ್ಯಾಣ ಮಂಟಪ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ನಂತರ ಕಟ್ಟಡದ ಬಗ್ಗೆ ಮಾತನಾಡಿ, ಇದು ಶಹಾಬುದ್ದಿನ್ ಎಂಬವರಿಗೆ ಸೇರಿದ್ದಾಗಿದ್ದು ಇವರು ಕ್ಲಾಸ್ ಒನ್ ಗುತ್ತಿಗೆದಾರರಾಗಿದ್ದು, ಎಲ್ಲಾ ಕಾನೂನು ಗೊತ್ತಿದ್ದು ಸಹಾ ಅಕ್ರಮ ಕಟ್ಟಡ ಕಟ್ಟಿದ್ದು, ಇವರ ಗುತ್ತಿಗೆ ಪರವಾನಿಗೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಲಾಗುವುದು. ಈ ಮೂಲಕ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದರು.





