ಪಡಿತರ ಚೀಟಿ ನೀಡಲು ಪಂಚಾಯತ್‌ಗೆ ಅಧಿಕಾರ ಸಿಗಲಿ
ಮಾನ್ಯರೆ,
ಕರ್ನಾಟಕ ರಾಜ್ಯದಲ್ಲಿ ಲಕ್ಷಗಟ್ಟಲೆ ನಕಲಿ ಪಡಿತರ ಚೀಟಿ ವಿತರಣೆಯಾಗಿದೆ. ಎಪಿಎಲ್‌ಗೆ ಅರ್ಹತೆ ಇರುವವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂಬಿತ್ಯಾದಿ ಮಾಹಿತಿಗಳು ಆಹಾರ ಇಲಾಖೆಯಿಂದ ಹಾಗೂ ಸಚಿವರಿಂದ ಪತ್ರಿಕೆಗಳಲ್ಲಿ ಹೇಳಿಕೆ ರೂಪದಲ್ಲಿ ಲಭ್ಯವಾಗುತ್ತಿದೆ. ಇದರ ಜೊತೆಗೆ ನಕಲಿ ಪಡಿತರ ಚೀಟಿದಾರರನ್ನು ಗುರುತಿಸಿಕೊಟ್ಟರೆ ಇಲಾಖೆಯಿಂದ ನಗದು ಬಹುಮಾನವೂ ಘೋಷಿಸಲ್ಪಟ್ಟಿದೆ. ಆದರೆ ಬಹುಮಾನ ನೀಡಿದ ಮಾಹಿತಿ ಈ ತನಕ ಕಂಡುಬಂದಿಲ್ಲ. ಬರುವುದೂ ಇಲ್ಲ ಬಿಡಿ. ಆದ್ದರಿಂದ ಪಡಿತರ ಚೀಟಿ ನೀಡಲು ಸುಲಭೋಪಾಯ ಕಂಡು ಹಿಡಿಯುವುದೇ ಪರ್ಯಾಯ ದಾರಿ.
ಗ್ರಾಮ ಪಂಚಾಯತ್‌ಗಳಲ್ಲಿ ಈಗಾಗಲೇ ಮನೆಸಂಖ್ಯೆಗಳನ್ನು ನೀಡಿ ಮನೆ ಯಜಮಾನರ ಹೆಸರು ನಮೂದಿಸಿರುವ ರಿಜಿಸ್ಟ್ರಿ ಇರುತ್ತದೆ. ಮನೆ ತೆರಿಗೆ ಪರಿಷ್ಕರಣೆ ಮಾಡುವಾಗ ಆ ಮನೆಯವರ ಆದಾಯ, ಅಂತಸ್ತು ತಿಳಿದಿರುತ್ತದೆ. ಅಂತಹವರಲ್ಲಿ ಆರ್ಥಿಕ ಸ್ಥಿತಿ ಉತ್ತಮವಿರುವವರ ಯಾದಿ ತಯಾರಿಸಿ, ಉಳಿದವರನ್ನು ಪ್ರತ್ಯೇಕವಾಗಿ ಗುರುತಿಸಿ, ವಾರ್ಡುವಾರು ಪಟ್ಟಿಮಾಡಿ, ವಾರ್ಡುಸಭೆಯಲ್ಲಿ ಮಂಡಿಸಿ, ಯಾರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕೆಂಬುದನ್ನು ನಿರ್ಧರಿಸಬಹುದು. ಪಂಚಾಯತ್ ಸದಸ್ಯರು ಸೂಚಿಸಿದ ಪ್ರಯೋಜನಾರ್ಥಿಗಳ ಯಾದಿಯನ್ನೇ ತಯಾರಿಸಿ, ಅದರಲ್ಲೂ ಯಾರಿಗೆ ಅರ್ಹತೆ ಇದೆ ಎನ್ನುವುದನ್ನು ತಿಳಿಯಲು, ಅನ್ಯ ಇಲಾಖೆಯವರಿಂದ ಸಮೀಕ್ಷೆ ನಡೆಸಬೇಕು. ಎಲ್ಲಾ ಹಂತಗಳಲ್ಲಿ ಪರಿಶೋಧನೆಗೊಳಪಟ್ಟಾಗ ನಕಲಿ ಪಡಿತರ ಚೀಟಿಗೆ ಅವಕಾಶವಿರುವುದಿಲ್ಲ. ಮನೆಯ ಕರೆಂಟ್ ಬಿಲ್ಲು ರೂ. 350, ಸೈಕಲ್ ಇಲ್ಲದವರು, ವಾಹನ ಇಲ್ಲದವರು ಎಂಬ ಮಾನದಂಡಗಳನ್ನು ಕೈ ಬಿಟ್ಟು ಅರ್ಹರಿಗೆ ಪಡಿತರ ಚೀಟಿ ನೀಡಲು ಗ್ರಾಪಂಗೆ ಅಧಿಕಾರ ನೀಡುವಂತಾಗಬೇಕು. ಇದರಿಂದ ಫಲಾನುಭವಿಗಳು ತಾಲೂಕು ಕಚೆೇರಿಗೆ ಅಲೆದಾಡುವುದನ್ನು ತಪ್ಪಿಸಬಹುದು. ಬಡ ಕೂಲಿ ಕಾರ್ಮಿಕರಿಗೆ ದಿನದ ಕೂಲಿಗೂ ಹೋಗದೆ ಕಚೆೇರಿಯಿಂದ ಕಚೆೇರಿಗೆ ಅಲೆಯುವುದು ತಪ್ಪುತ್ತದೆ. ದೇಶದ ಉದ್ಧಾರ ಗ್ರಾಮದ ಉದ್ಧಾರದಿಂದಲೇ ಎಂಬ ಕಟುಸತ್ಯವನ್ನು ತಿಳಿಯೋಣ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕರಿಸಬೇಕಾಗಿದೆ.





