ಮೋದಿ ಸರಕಾರಕ್ಕೆ ಮುಖಭಂಗ

ಅರುಣಾಚಲಪ್ರದೇಶದಲ್ಲಿ ಸಂವಿಧಾನದ ಆಶಯಗಳನ್ನು ಹೊಸಕಿಹಾಕಿ ಚುನಾಯಿತ ಸರಕಾರವನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತವನ್ನು ಹೇರಿದ ಕೇಂದ್ರದ ಮೋದಿ ಸರಕಾರಕ್ಕೆ ಸುಪ್ರೀಂಕೋರ್ಟ್ ಕಪಾಳ ಮೋಕ್ಷ ಮಾಡಿದೆ. ಉತ್ತರಾಖಂಡ ವಿಷಯದಲ್ಲಿ ಈಗಾಗಲೇ ಮುಖಭಂಗಕ್ಕೆ ಒಳಗಾಗಿದ್ದ ಕೇಂದ್ರ ಸರಕಾರಕ್ಕೆ ಈ ಬಾರಿ ನ್ಯಾಯಾಲಯ ನೀಡಿದ ತೀರ್ಪು ಮುಟ್ಟಿನೋಡಿಕೊಳ್ಳುವಂತಿದೆ. ಕಳೆದ ಒಂದು ವರ್ಷದಿಂದ ಪ್ರಜಾಪ್ರಭುತ್ವಕ್ಕೆ ಕಳಂಕ ತರುವಂತಹ ವಿದ್ಯಮಾನಗಳು ಅರುಣಾಚಲದಲ್ಲಿ ನಡೆದಿದ್ದವು. 60 ಸದಸ್ಯ ಬಲದ ಅರುಣಾಚಲ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ನಬಮ್ ಟುಕಿ ಅವರ ಸರಕಾರಕ್ಕೆ 42 ಶಾಸಕರ ಬೆಂಬಲವಿತ್ತು. ಆದರೂ ಪಕ್ಷದ ಒಳಗಿನ ಭಿನ್ನಾಭಿಪ್ರಾಯದಿಂದಾಗಿ ಕಳೆದ ವರ್ಷ ಕೊಂಚ ಅಸ್ಥಿರತೆ ಉಂಟಾಗಿತ್ತು. ಅದನ್ನೇ ಬಳಸಿಕೊಂಡು ಕೇಂದ್ರ ಸರಕಾರ ರಾಷ್ಟ್ರಪತಿ ಆಡಳಿತ ಜಾರಿಗೆ ತಂದಿತ್ತು. ಇದೇ ರೀತಿ ಉತ್ತರಾಖಂಡದಲ್ಲಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಅಮಾನತು ಮಾಡಿ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರಕಾರ ರಾಷ್ಟ್ರಪತಿ ಆಡಳಿತ ಜಾರಿ ಮಾಡಿತ್ತು. ಆದರೆ, ಮೇ ತಿಂಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ಹೊಸದಾಗಿ ವಿಶ್ವಾಸ ಮತ ಯಾಚಿಸುವಂತೆ ರಾವತ್ ಅವರಿಗೆ ಸೂಚಿಸಿತ್ತು.
ಈಗ ಅರುಣಾಚಲದಲ್ಲೂ ಇದರ ಪುನರಾವರ್ತನೆಯಾಗಿದೆ. ಅಲ್ಲಿನ ಚುನಾಯಿತ ಸರಕಾರವನ್ನು ಕಿತ್ತು ಹಾಕಿ ಕೇಂದ್ರ ಸರಕಾರ ಹೇರಿದ್ದ ರಾಷ್ಟ್ರಪತಿ ಆಡಳಿತವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ತನ್ನ ಚಾರಿತ್ರಿಕ ತೀರ್ಪಿನಲ್ಲಿ 2015ರ ಡಿಸೆಂಬರ್ 15ಕ್ಕೆ ಮೊದಲಿದ್ದ ಸ್ಥಿತಿ ಮರುಸ್ಥಾಪನೆಗೆ ಆದೇಶ ನೀಡಿದೆ. ಇದರಿಂದಾಗಿ ನಬಮ್ ಟುಕಿ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ಚುನಾಯಿತ ಸರಕಾರಕ್ಕೆ ಸದನದಲ್ಲಿ ಬಹುಮತ ಇರುವಾಗ ರಾಜ್ಯಪಾಲರು ಅನಗತ್ಯವಾಗಿ ರಾಜಕೀಯ ಗೊಂದಲ ಹುಟ್ಟುಹಾಕಬಾರದು. ತಮ್ಮ ಮರ್ಜಿಯಂತೆ ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಸಂವಿಧಾನ ಪೀಠ ನೀಡಿರುವ ತೀರ್ಪು ಸಂವಿಧಾನವನ್ನು ಬುಡಮೇಲು ಮಾಡಲು ಹೊರಟವರಿಗೆ ನೀಡಿದ ಎಚ್ಚರಿಕೆಯ ಗಂಟೆಯಾಗಿದೆ.
ಅರುಣಾಚಲ ಬಿಕ್ಕಟ್ಟಿಗೆ ಮೇಲ್ನೋಟಕ್ಕೆ ಅಲ್ಲಿನ ಆಳುವ ಪಕ್ಷದೊಳಗಿನ ಭಿನ್ನಾಭಿಪ್ರಾಯ ಕಾರಣ ಎಂಬುದು ನೆಪವಾಗಿರಬಹುದು. ಆದರೆ, ಸಂಪೂರ್ಣ ಬಹುಮತ ಹೊಂದಿರುವ ಸರಕಾರವನ್ನು ವಜಾ ಮಾಡಲು ಇದು ಕಾರಣವಾಗಬಾರದು. ಅಲ್ಲಿನ ಆರೋಗ್ಯ ಸಚಿವ ಕಲಿಖೊ ಪುಲ್ ಅವರ ಹಣಕಾಸು ದುರುಪಯೋಗ ಕಾರಣಕ್ಕೆ ಅವರನ್ನು ಸಂಪುಟದಿಂದ 2014ರಲ್ಲೇ ಕೈಬಿಡಲಾಗಿತ್ತು. ಕೆಲ ತಿಂಗಳ ನಂತರ ಪಕ್ಷದಿಂದಲೂ ಹೊರ ಹಾಕಲಾಗಿತ್ತು. ಇದು ಅಲ್ಲಿನ ಬಿಕ್ಕಟ್ಟಿಗೆ ಕಾರಣ. 21 ಶಾಸಕರು ತಮ್ಮದೇ ಸರಕಾರದ ವಿರುದ್ಧ ಬಂಡೆದ್ದುದು ನಿಜ. ಆದರೆ, ರಾಷ್ಟ್ರಪತಿ ಆಡಳಿತಕ್ಕೆ ಇದು ನೆಪವಾಗಬಾರದು. ಇಂತಹ ಸನ್ನಿವೇಶದಲ್ಲಿ ನಿಯಮದಂತೆ ಮುಖ್ಯಮಂತ್ರಿಗೆ ವಿಶ್ವಾಸಮತ ಯಾಚನೆ ಮಾಡುವ ಮೊದಲ ಅವಕಾಶವನ್ನು ನೀಡಬೇಕು. ಆದರೆ, ಅಲ್ಲಿನ ರಾಜ್ಯಪಾಲರು ಕಾಂಗ್ರೆಸ್‌ನ ಆಂತರಿಕ ಬಂಡಾಯದ ಲಾಭ ಮಾಡಿಕೊಳ್ಳಲು ಬಿಜೆಪಿಗೆ ಅವಕಾಶ ನೀಡಿದರು. ವಿಧಾನಸಭೆಯ ಹೊರಗೆ ಭಿನ್ನಮತೀಯರು ಸಭೆ ನಡೆಸುವುದು, ಸ್ಪೀಕರ್‌ಗೆ ವಾಗ್ದಂಡನೆ ಮಾಡುವುದು, ಹೊಸ ಸ್ಪೀಕರ್ ಆಯ್ಕೆಗೆ ಪ್ರಚೋದನೆ ನೀಡುವುದು ಇವೆಲ್ಲ ಕಳಂಕಕಾರಿ ಕೃತ್ಯಗಳಾಗಿವೆ. ಈ ಬಗ್ಗೆ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸ್ಥಳೀಯ ಹೈಕೋರ್ಟ್ ಈ ಮೊದಲೇ ಛೀಮಾರಿ ಹಾಕಿತ್ತು. ಆದರೂ ಚುನಾಯಿತ ಸರಕಾರವನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತವನ್ನು ಹೇರುವ ಅನಿವಾರ್ಯ ಸ್ಥಿತಿ ನಿರ್ಮಾಣ ಮಾಡಲಾಯಿತು. ಅದಕ್ಕಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಉತ್ತರಾಖಂಡದಂತೆ ಅರುಣಾಚಲ ಪ್ರದೇಶದಲ್ಲೂ ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿದ್ದು ಸಾಬೀತಾಗಿದೆ. ಅಂತಲೇ ಅವರನ್ನು ತಕ್ಷಣ ವಜಾಮಾಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿರುವುದು ಸಮರ್ಥನೀಯವಾಗಿದೆ. ಸಂವಿಧಾನಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನು ನೀಡದ ರಾಜ್ಯಪಾಲರು ರಾಜ್ಯಪಾಲ ಹುದ್ದೆಯಲ್ಲಿ ಇರಕೂಡದು ಎಂಬ ಸಂದೇಶವನ್ನು ಸುಪ್ರೀಂಕೋರ್ಟ್ ನೀಡಿದೆ. ರಾಜ್ಯಪಾಲರು ಸಂವಿಧಾನವನ್ನು ಪಾಲನೆ ಮಾಡುವ ಹೊಣೆಹೊತ್ತಿದ್ದಾರೆ. ಇಂತಹ ಮಹತ್ತರ ಹೊಣೆಗಾರಿಕೆ ಹೊತ್ತಿರುವ ರಾಜ್ಯಪಾಲರು ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಸರಕಾರದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಒತ್ತಾಸೆಯಾಗಿ ನಿಲ್ಲಬೇಕು. ಯಾವುದೇ ಹಸ್ತಕ್ಷೇಪಕ್ಕೂ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಶಾಸಕರ ಖರೀದಿ ಹಾಗೂ ಇತರ ಅನಪೇಕ್ಷಿತ ರಾಜಕೀಯ ವ್ಯವಹಾರಗಳಿಗೆ ರಾಜ್ಯಪಾಲರು ಅವಕಾಶ ನೀಡಬಾರದು ಎಂದು ಈ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ಕೇಂದ್ರ ಸರಕಾರ ನಡೆಸಿದ್ದ ಬುಡಮೇಲು ಕೃತ್ಯದ ಬಗ್ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದರಿಂದ ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗಬಹುದು. ಕಾಂಗ್ರೆಸ್ ಮಾತ್ರವಲ್ಲದೆ ಬಹುಜನ ಸಮಾಜ ಪಕ್ಷ, ಸಂಯುಕ್ತ ಜನತಾದಳ, ಬಿಜೆಡಿ, ಡಿಎಂಕೆ, ಎಡಪಕ್ಷಗಳು ಈ ಎಲ್ಲ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಉತ್ತರಾಖಂಡ ಮಾತ್ರವಲ್ಲ, ಅರುಣಾಚಲದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ರಾಜ್ಯಪಾಲರನ್ನು ದೂರಿ ಪ್ರಯೋಜನವಿಲ್ಲ. ಈ ರಾಜ್ಯಪಾಲರನ್ನು ಬಳಸಿಕೊಂಡು ಅವರ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆ ನಡೆಸಲು ಕೇಂದ್ರ ಕುಮ್ಮಕ್ಕು ನೀಡಿದೆ. ಪ್ರಧಾನ ಮಂತ್ರಿ ಮತ್ತು ಗೃಹಸಚಿವರಿಗೆ ಗೊತ್ತಿಲ್ಲದೆ ಈ ಎರಡು ಸರಕಾರಗಳನ್ನು ವಜಾಮಾಡಿ ರಾಷ್ಟ್ರಪತಿ ಆಡಳಿತವನ್ನು ಹೇರಿರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿದ ಎಚ್ಚರಿಕೆ ಸಕಾಲಿಕವಾಗಿದೆ. ಇಲ್ಲವಾದರೆ ಬಿಜೆಪಿಯೇತರ ಸರಕಾರಗಳನ್ನು ಬುಡಮೇಲು ಕೃತ್ಯದ ಮೂಲಕ ಉರುಳಿಸಲು ಕೇಂದ್ರ ಸರಕಾರ ಮಸಲತ್ತು ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಪು ಬಂದಿದೆ ಎಂದು ನೆಮ್ಮದಿಯಾಗಿದ್ದರೆ ಸಾಲದು. ಮೋದಿ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳ ವಿರುದ್ಧ ಎಲ್ಲ ಜನತಾಂತ್ರಿಕ ಶಕ್ತಿಗಳು ಒಗ್ಗೂಡಿ ಹೋರಾಡಬೇಕಾಗಿದೆ.







