ಆನ್ಲೈನ್ ಬೆದರಿಕೆ ವಿರುದ್ಧ ಮೇನಕಾ ಹೆಲ್ಪ್ಲೈನ್
ಆರೆಸ್ಸೆಸ್ ಗರಂ
ಹೊಸದಿಲ್ಲಿ, ಜು.14: ಮಹಿಳೆಯರಿಗೆ ಸೈಬರ್ ಬೆದರಿಕೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಆರಂಭಿಸಿರುವ ಸಹಾಯವಾಣಿಯೊಂದರ ಬಗ್ಗೆ ಆರೆಸ್ಸೆಸ್ ಅಸಮಾಧಾನಗೊಂಡಿದೆ. ಸಚಿವೆ ಮೇನಕಾ ಗಾಂಧಿ ಆಂತರಿಕ ಸಮಾಲೋಚನೆ ನಡೆಸದೆಯೇ ಸಹಾಯವಾಣಿ ಸ್ಥಾಪನೆಯ ನಿರ್ಧಾರ ಕೈಗೊಂಡಿದ್ದಾರೆಂದು ಅದು ಹೇಳಿದೆ.
ಈ ಸಹಾಯ ವಾಣಿಯಿಂದ ಪ್ರಧಾನಿ ಹಾಗೂ ಸರಕಾರ ವನ್ನು ‘ಸ್ಫೂರ್ತಿಯುತವಾಗಿ ಬೆಂಬಲಿಸುವ’ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಕೈಗಳನ್ನು ಕಟ್ಟಿ ಹಾಕಬಹುದು. ಅವರಿಗೆ ತೊಂದರೆಯಾಗಬಹುದೆಂದು ಹಿರಿಯ ಬಿಜೆಪಿ ಪದಾಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ.
ಸರಕಾರದ ನೀತಿಗಳನ್ನು ವಿರೋಧಿಸುವವರಿಗೆ ಸಂಘಪರಿವಾರದ ಬೆಂಬಲಿಗರು ಬೆದರಿಕೆ ಹಾಕುತ್ತಾರೆ ಹಾಗೂ ಟೀಕಿಸುತ್ತಾರೆಂಬುದು ಸಾಮಾಜಿಕ ಮಾಧ್ಯಮ ಬಳಕೆದಾರರ ಆರೋಪವಾಗಿದೆ. ಅವರ ಬರಹಗಳು ಮುಖ್ಯವಾಗಿ ಮಹಿಳಾ ಬಳಕೆದಾರರನ್ನು ಗುರಿಯಾಗಿಸುತ್ತವೆ. ಅವರಿಗೆ ಹಿಂಸೆ ಹಾಗೂ ಅತ್ಯಾಚಾರದ ಬೆದರಿಕೆಯನ್ನು ಅವರು ಹಾಕುತ್ತಾರೆಂಬುದು ಕೆಲವರ ಆಪಾದನೆಯಾಗಿದೆ.
ಆದರೆ, ಈ ಸೈಬರ್ ಬೆದರಿಕೆಗಳು ಮಹಿಳೆಯರನ್ನು ಮಾತ್ರ ಗುರಿಯಾಗಿರಿಸುತ್ತವೆಯೆಂದು ಯಾಕೆ ಭಾವಿಸಬೇಕೆಂದು ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ.
ಆನ್ಲೈನ್ ಬೆದರಿಕೆಯನ್ನು ನಿಭಾಯಿಸುವ ಹಾಗೂ ಅಂತಹ ಬೆದರಿಕೆಗಳ ಬಗ್ಗೆ ನಿಗಾ ವಹಿಸಲು ಮೀಸಲಾದ ಸಹಾಯವಾಣಿ ಹಾಗೂ ತಂಡವೊಂದನ್ನು ರಚಿಸುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿಯವರ ಕ್ರಮವು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಕಳೆದ ತಿಂಗಳು ಅವರು, ಆನ್ಲೈನ್ನಲ್ಲಿ ಬೆದರಿಕೆ, ನಿಂದನೆ ಹಾಗೂ ಹಿಂಬಾಲಿಸುವಿಕೆಯನ್ನೆದುರಿಸುತ್ತಿರುವ ಮಹಿಳೆಯರಿಗಾಗಿ ‘ಐ ಆ್ಯಮ್ ಟ್ರೋಲ್ಡ್ ಹೆಲ್ಪ್’ ಎಂಬ ಹ್ಯಾಶ್ಟ್ಯಾಗ್ ಆರಂಭಿಸಿದ್ದರು ಹಾಗೂ ಈ ಬಗ್ಗೆ ತನ್ನ ವೈಯಕ್ತಿಕ ಇ-ಮೇಲ್ ಗೆ ದೂರು ನೀಡುವಂತೆ ಜನರಿಗೆ ಮನವಿ ಮಾಡಿದ್ದರು.