ನನ್ನ ಸರಕಾರ ಉರುಳಿಸಲು ಭಾರತದ ಸಂಚು
ನೇಪಾಳ ಪ್ರಧಾನಿ ಒಲಿ ಆರೋಪ

ಕಠ್ಮಂಡು, ಜು. 14: ತನ್ನ ಸರಕಾರಕ್ಕೆ ಸಿಪಿಎನ್ (ಮಾವೊಯಿಸ್ಟ್ ಸೆಂಟರ್) ಬೆಂಬಲ ಹಿಂದೆಗೆದುಕೊಳ್ಳುವುದರ ಹಿಂದೆ ಭಾರತದ ಕೈವಾಡವಿದೆ ಎಂದು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ಆರೋಪಿಸಿದ್ದಾರೆ.
ಕಠ್ಮಂಡುವಿನಲ್ಲಿ ಇಂದು ನಡೆದ ರಾಷ್ಟ್ರೀಯ ಭದ್ರತೆ ಕುರಿತ ಸಮ್ಮೇಳನವೊಂದರಲ್ಲಿ ಒಲಿ ಈ ಆರೋಪ ಮಾಡಿದರು. ಸರಕಾರ ಬದಲಾವಣೆಯ ಪ್ರಕ್ರಿಯೆ ‘‘ಸ್ವಯಂಪ್ರೇರಿತವಾಗಿ ನಡೆದಿಲ್ಲ, ಅದನ್ನು ರಿಮೋಟ್ ಕಂಟ್ರೋಲ್ ಮೂಲಕ ಮಾಡಲಾಗಿದೆ’’ ಎಂದು ಅವರು ಹೇಳಿದರು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಒಲಿ ಅಧಿಕಾರಕ್ಕೆ ಬಂದ ಬಳಿಕ ಭಾರತ-ನೇಪಾಳ ಸಂಬಂಧ ಹದಗೆಟ್ಟಿದೆ. ಅವರು ಅಧಿಕಾರಕ್ಕೆ ಬಂದ ಬಳಿಕ ಐದು ತಿಂಗಳ ಕಾಲ ನೇಪಾಳ-ಭಾರತ ಗಡಿಯಲ್ಲಿ ಮದೇಸಿ ಪ್ರತಿಭಟನಾಕಾರರು ಆರ್ಥಿಕ ದಿಗ್ಬಂಧನೆ ನಡೆಸಿದರು.
ನೇಪಾಳದ ಆಂತರಿಕ ರಾಜಕೀಯ ವ್ಯವಹಾರಗಳಲ್ಲಿ ಭಾರತೀಯ ‘‘ಹಸ್ತಕ್ಷೇಪ’’ವನ್ನು ಅವರು ಆರಂಭದಿಂದಲೇ ಟೀಕಿಸುತ್ತಿದ್ದರು.
ನೇಪಾಳದ ಮಾವೊವಾದಿಗಳು ಮಂಗಳವಾರ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ. ರಾಜೀನಾಮೆ ನೀಡಲು ಒಲಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಸಿಪಿಎನ್ (ಮಾವೊಯಿಸ್ಟ್ ಸೆಂಟರ್) ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷಗಳು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿವೆ.
ಮಾವೊಯಿಸ್ಟ್ ಸೆಂಟರ್ ಬೆಂಬಲ ಹಿಂದೆಗೆದ ಬಳಿಕ ‘‘ಪಂಚತಾರಾ ಹೊಟೇಲ್‌ವೊಂದರಲ್ಲಿ ಭರ್ಜರಿ ಭೋಜನ ನಡೆಯಿತು’’ ಎಂದು ಒಲಿ ಹೇಳಿದರು.
ಮಾವೊಯಿಸ್ಟ್ ಸೆಂಟರ್ ಸರಕಾರಕ್ಕೆ ಬೆಂಬಲ ಹಿಂದೆಗೆದುಕೊಂಡ ಬಳಿಕ ಮಂಗಳವಾರ ಸಂಜೆ ನೇಪಾಳಕ್ಕೆ ಭಾರತದ ರಾಯಭಾರಿ ರಂಜಿತ್ ರೇ ಭೋಜನ ನೀಡಿದ್ದಾರೆ ಎಂಬುದಾಗಿ ನೇಪಾಳಿ ಮಾಧ್ಯಮಗಳು ವ್ಯಾಪಕವಾಗಿ ಪ್ರಚಾರ ಮಾಡಿವೆ.
ನೆರೆ ದೇಶಗಳೊಂದಿಗೆ ಹಾರ್ದಿಕ ಸಂಬಂಧವನ್ನು ಹೊಂದುವ ಹೆಸರಿನಲ್ಲಿ ‘‘ರಾಷ್ಟ್ರೀಯ ಭದ್ರತೆಯೊಂದಿಗೆ ನಾನು ರಾಜಿ ಮಾಡಿಕೊಳ್ಳಲಾರೆ’’ ಎಂದು ಒಲಿ ಹೇಳಿದರು.







