ಫಿಫಾ ರ್ಯಾಂಕಿಂಗ್: ಇಂಗ್ಲೆಂಡ್‌ನ್ನು ಹಿಂದಿಕ್ಕಿದ ವೇಲ್ಸ್

ಪ್ಯಾರಿಸ್, ಜು.14: ಇತ್ತೀಚೆಗೆ ಕೊನೆಗೊಂಡ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ವೇಲ್ಸ್ ಫುಟ್ಬಾಲ್ ತಂಡ ಗುರುವಾರ ಬಿಡುಗಡೆಯಾಗಿರುವ ಫಿಫಾ ವಿಶ್ವ ರ್ಯಾಂಕಿಂಗ್‌ನಲ್ಲಿ 15 ಸ್ಥಾನ ಭಡ್ತಿ ಪಡೆದು 11ನೆ ಸ್ಥಾನಕ್ಕೇರಿದೆ. 1958ರ ಬಳಿಕ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ವೇಲ್ಸ್ ತಂಡ ಫ್ರಾನ್ಸ್‌ನಲ್ಲಿ ನಡೆದಿದ್ದ ಯುರೋ ಕಪ್‌ನಲ್ಲಿ ಅಂತಿಮ ನಾಲ್ಕರ ಘಟ್ಟವನ್ನು ತಲುಪಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಪೋರ್ಚುಗಲ್‌ನ ವಿರುದ್ಧ ಸೋತಿತ್ತು.
1966ರ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಐಸ್‌ಲ್ಯಾಂಡ್ ವಿರುದ್ಧ ಹೀನಾಯವಾಗಿ ಸೋಲುವುದರೊಂದಿಗೆ ಅಂತಿಮ 16ರ ಸುತ್ತಿನಲ್ಲಿ ಟೂರ್ನಿಯಿಂದ ಹೊರ ನಡೆದಿತ್ತು. ಈಹಿನ್ನೆಲೆಯಲ್ಲಿ ರ್ಯಾಂಕಿಂಗ್‌ನಲ್ಲಿ 2 ಸ್ಥಾನ ಕೆಳಜಾರಿ 13ನೆ ಸ್ಥಾನದಲ್ಲಿದೆ.
ಯುರೋ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದ ಅತ್ಯಂತ ಪುಟ್ಟ ರಾಷ್ಟ್ರ(330,000 ಜನಸಂಖ್ಯೆ) ಐಸ್‌ಲ್ಯಾಂಡ್ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದ್ದರೂ ರ್ಯಾಂಕಿಂಗ್‌ನಲ್ಲಿ 12 ಸ್ಥಾನ ಭಡ್ತಿ ಪಡೆದು 22ನೆ ಸ್ಥಾನಕ್ಕೇರಿದೆ.
ಇನ್ನುಳಿದಂತೆ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-5 ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೋಪಾ ಅಮೆರಿಕ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಅರ್ಜೆಂಟೀನ ತಂಡ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೆ, ಬೆಲ್ಜಿಯಂ, ಕೊಲಂಬಿಯಾ, ಜರ್ಮನಿ ಹಾಗೂ ಚಿಲಿ ತಂಡಗಳು ನಂತರದ ಸ್ಥಾನದಲ್ಲಿವೆ.
1987ರ ಬಳಿಕ ಮೊದಲ ಬಾರಿ ಕೊಪಾ ಅಮೆರಿಕ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದಿದ್ದ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ತಂಡ 9ನೆ ಸ್ಥಾನಕ್ಕೆ ಕುಸಿದಿದೆ.
ಫಿಫಾ ಅಗ್ರ-10 ರ್ಯಾಂಕಿಂಗ್: 1.ಅರ್ಜೆಂಟೀನ, 2.ಬೆಲ್ಜಿಯಂ, 3.ಕೊಲಂಬಿಯಾ, 4.ಜರ್ಮನಿ, 5. ಚಿಲಿ, 6. ಪೋರ್ಚುಗಲ್, 7.ಫ್ರಾನ್ಸ್, 8. ಸ್ಪೇನ್, 9. ಬ್ರೆಝಿಲ್, 10. ಇಟಲಿ.







