ಬೋರಿಸ್ ಜಾನ್ಸನ್ ವಿದೇಶ ಸಚಿವ
ಲಂಡನ್, ಜು. 14: ನೂತನ ಪ್ರಧಾನಿ ತೆರೇಸಾ ಮೇ ಬ್ರಿಟನ್‌ನ ನೂತನ ವಿದೇಶ ಸಚಿವರಾಗಿ ಲಂಡನ್‌ನ ಮಾಜಿ ಮೇಯರ್ ಬೊರಿಸ್ ಜಾನ್ಸನ್‌ರನ್ನು ನೇಮಿಸಿದ್ದಾರೆ.
ಅದೇ ವೇಳೆ, ಡೇವಿಡ್ ಕ್ಯಾಮರೂನ್ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಮೈಕಲ್ ಫಾಲನ್ ತೆರೇಸಾ ಸರಕಾರದಲ್ಲೂ ತನ್ನ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ.
ಐರೋಪ್ಯ ಒಕ್ಕೂಟ ಆಘಾತ
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆನ್ನುವ ಪ್ರಚಾರದ ಮುಂಚೂಣಿಯಲ್ಲಿದ್ದ ಬೊರಿಸ್ ಜಾನ್ಸನ್‌ರನ್ನು ಬ್ರಿಟನ್‌ನ ನೂತನ ವಿದೇಶ ಸಚಿವನಾಗಿ ನೇಮಿಸಿರುವ ಪ್ರಧಾನಿ ತೆರೇಸಾ ಮೇಯ ನಿರ್ಧಾರದ ಬಗ್ಗೆ ಯುರೋಪ್‌ನ ಮಾಧ್ಯಮ ಅಚ್ಚರಿ ಹಾಗೂ ಹತಾಶೆ ವ್ಯಕ್ತಪಡಿಸಿದೆ.
ರಾಜಕೀಯ ಕಪಿಚೇಷ್ಟೆಗಳಿಗೆ ಹೆಸರಾಗಿರುವ ಮತ್ತು ಪ್ರಮಾದಗಳನ್ನು ನಡೆಸುವ ಪ್ರವೃತ್ತಿಯುಳ್ಳ ಲಂಡನ್‌ನ ಮಾಜಿ ಮೇಯರ್‌ರನ್ನು, ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ನನ್ನು ಹೊರ ತರುವ ಪ್ರಕ್ರಿಯೆಯ ಉನ್ನತ ರಾಜತಾಂತ್ರಿಕನಾಗಿ ನೇಮಿಸಿರುವ ಬಗ್ಗೆ ಯುರೋಪ್‌ನಲ್ಲಿ ಆಘಾತ ವ್ಯಕ್ತವಾಗಿದೆ.
‘‘ಬಾಂಬ್‌ಶೆಲ್’’ ಮಾದರಿಯ ಈ ನೇಮಕಾತಿ ಸುಳ್ಳು ಎಂಬುದಾಗಿ ಹೆಚ್ಚಿನವರು ಆರಂಭದಲ್ಲಿ ಯೋಚಿಸಿದ್ದರು ಎಂದು ಜರ್ಮನಿಯ ‘ಡೈ ವೆಲ್ಟ್’ ಪತ್ರಿಕೆ ಹೇಳಿದೆ. ಜಾನ್ಸನ್ ಐರೋಪ್ಯ ಒಕ್ಕೂಟವನ್ನು ಅಡಾಲ್ಫ್ ಹಿಟ್ಲರ್‌ಗೆ ಹಾಗೂ ಹಿಲರಿ ಕ್ಲಿಂಟನ್‌ರನ್ನು ‘‘ಮಾನಸಿಕ ರೋಗಗಳ ಆಸ್ಪತ್ರೆಯಲ್ಲಿರುವ ವಿಕೃತ ಮನೋಭಾವದ ನರ್ಸ್’’ ಎಂಬುದಾಗಿ ಬಣ್ಣಿಸಿದ್ದರು ಎಂಬುದನ್ನು ಪತ್ರಿಕೆ ನೆನಪಿಸಿದೆ.







