ಸಿಬಿಐಗೆ ವಹಿಸಲು ಆಗ್ರಹಿಸಿ ಇಂದು ಧರಣಿ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ
ಮಂಗಳೂರು, ಜು.14; ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಶುಕ್ರವಾರ ಮಂಗಳೂರು ವಕೀಲರ ಸಂಘದ ಸದಸ್ಯರು ಕಪ್ಪು ಬ್ಯಾಡ್ಜ್ ಧರಿಸಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲಿದ್ದಾರೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ತಿಳಿಸಿದ್ದಾರೆ.
ಮಂಗಳೂರು ವಕೀಲರ ಸಂಘದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು. 15ರಂದು ಬೆಳಗ್ಗೆ 10:30ರಿಂದ 11ರವರೆಗೆ ವಕೀಲರ ಸಂಘದ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು. ಕಕ್ಷಿದಾರರಿಗೆ ಮತ್ತು ನ್ಯಾಯಾಲಯದ ಕಲಾಪಕ್ಕೆ ತೊಂದರೆಯಾಗದಂತೆ ಕಪ್ಪು ಬ್ಯಾಡ್ಜ್ ಧರಿಸಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದರು.ವೈಎಸ್ಪಿ ಗಣಪತಿ ಆತ್ಮಹತ್ಯೆಗೈಯುವ ಮುನ್ನ ಟಿವಿ ಮಾಧ್ಯಮಗಳಲ್ಲಿ ಮಾಡಿದ ಆರೋಪವನ್ನು ನನ್ನಲ್ಲಿ ಘಟನೆಯ ಐದು ದಿನಗಳ ಮುಂಚೆ ಹಂಚಿಕೊಂಡಿದ್ದರು. ಗಣಪತಿ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಡೆತ್ ಡಿಕ್ಲೆರೇಶನ್ ಎಂದು ಪರಿಗಣಿಸಬೇಕು. ಗಣಪತಿ ಆರೋಪ ಮಾಡಿರುವ ಸಚಿವ ಕೆ.ಜೆ.ಜಾರ್ಜ್, ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣವ್ ಮಾಹಂತಿ ಮತ್ತು ಕೆಂಪಯ್ಯ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯಾಂಗ ತನಿಖೆಯಿಂದ ಸೂಕ್ತ ಫಲಿತಾಂಶ ಬರಲು ಸಾಧ್ಯವಿಲ್ಲ. ಅದರಲ್ಲಿ ನ್ಯಾಯಾಲಯದಲ್ಲಾಗುವ ವಿಚಾರಣೆಯಂತೆ ವಿಚಾರಣೆ ಆಗುವುದಿಲ್ಲ. ಸಿಓಡಿಯಿಂದಲೂ ಸತ್ಯಾಂಶ ಹೊರಬರುವುದಿಲ್ಲ. ಆದ್ದರಿಂದ ಸಿಬಿಐ ತನಿಖೆಯೇ ನಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಕೀಲರ ಸಂಘದ ಪ್ರ.ಕಾರ್ಯದರ್ಶಿ ರಾಘವೇಂದ್ರ ಎಚ್.ವಿ., ಖಜಾಂಚಿ ಯತೀಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯ ರಾಹುಲ್ ಡಿಸಿಲ್ವ ಉಪಸ್ಥಿತರಿದ್ದರು.





