ತೀರ್ಪು ಜಾರಿಗೆ ಮುಂದಾದರೆ ‘ದಿಟ್ಟ ಪ್ರತಿಕ್ರಿಯೆ’: ಚೀನಾ ಎಚ್ಚರಿಕೆ
ಬೀಜಿಂಗ್, ಜು. 14: ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಮಂಡಳಿಯೊಂದು ನೀಡಿರುವ ತೀರ್ಪಿನ ಅನುಷ್ಠಾನದಂಥ ಯಾವುದಾದರೂ ಪ್ರಚೋದನಾತ್ಮಕ ಕೃತ್ಯಕ್ಕೆ ಯಾವುದಾದರೂ ದೇಶ ಮುಂದಾದಲ್ಲಿ ‘‘ದೃಢ ಪ್ರತಿಕ್ರಿಯೆ’’ಯನ್ನು ನೀಡುವುದಾಗಿ ಚೀನಾ ಗುರುವಾರ ಎಚ್ಚರಿಸಿದೆ.
‘‘ತೀರ್ಪಿನ ಆಧಾರದಲ್ಲಿ ಚೀನಾದ ಭದ್ರತಾ ಹಿತಾಸಕ್ತಿಯ ವಿರುದ್ಧ ಯಾರೇ ಆದರೂ ಪ್ರಚೋದನಾತ್ಮಕ ಕ್ರಮವನ್ನು ತೆಗೆದುಕೊಂಡರೆ, ಚೀನಾ ನಿರ್ಣಾಯಕ ಪ್ರತಿಕ್ರಿಯೆಯನ್ನು ನೀಡುವುದು ಎಂಬುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ’’ ಎಂದು ವಿದೇಶ ಸಚಿವಾಲಯದ ವಕ್ತಾರ ಲು ಕಂಗ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಂತಾರಾಷ್ಟ್ರೀಯ ನ್ಯಾಯಮಂಡಳಿಯು ನೀಡಿರುವ ತೀರ್ಪಿನ ಪರಿಣಾಮಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ತೀರ್ಪು ‘‘ಕಾನೂನುಬಾಹಿರ’’ ಎಂದು ಹೇಳಿಕೊಂಡರು. ಹಿಂದಿನ ಫಿಲಿಪ್ಪೀನ್ಸ್ ಸರಕಾರದ ಕಾನೂನುಬಾಹಿರ ಮನವಿ ಯಡಿ ಸ್ಥಾಪಿಸಲಾದ ನ್ಯಾಯಮಂಡಳಿ ನೀಡಿದ ತೀರ್ಪು ಅದಾಗಿದೆ ಎಂದರು. ಚೀನಾದ ಪ್ರಸಕ್ತ ನೀತಿಯ ಮೇಲೆ ನ್ಯಾಯಮಂಡಳಿಯ ತೀರ್ಪು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಕ್ತಾರರು ತಿಳಿಸಿದರು. ದಕ್ಷಿಣ ಚೀನಾ ಸಮುದ್ರದ ಮೇಲೆ ಏಕಸ್ವಾಮ್ಯ ಸ್ಥಾಪಿಸಲು ಚೀನಾಕ್ಕೆ ಯಾವುದೇ ಐತಿಹಾಸಿಕ ಹಕ್ಕಿಲ್ಲ ಎಂದು ನ್ಯಾಯಮಂಡಳಿಯ ತೀರ್ಪು ಹೇಳಿದೆ.







