ಪ್ರೀಮಿಯರ್ ಫುಟ್ಸಲ್ ಟೂರ್ನಿಯಲ್ಲಿ ಆಡಲು ರೊನಾಲ್ಡಿನೊ ಭಾರತಕ್ಕೆ ಆಗಮನ

ಚೆನ್ನೈ, ಜು.14: ಮೊದಲ ಆವೃತ್ತಿಯ ಪ್ರೀಮಿಯರ್ ಫುಟ್ಸಲ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಎರಡು ಬಾರಿಯ ಫಿಫಾ ಬ್ಯಾಲನ್ ಡಿ’ಒರ್ ಪ್ರಶಸ್ತಿ ವಿಜೇತ ಆಟಗಾರ ರೊನಾಲ್ಡಿನೊ ಭಾರತಕ್ಕೆ ಆಗಮಿಸಿದ್ದಾರೆ.
36ರ ಹರೆಯದ ಬ್ರೆಝಿಲ್‌ನ ಮಾಜಿ ಆಟಗಾರ ರೊನಾಲ್ಡಿನೊ ಗೋವಾ ಫ್ರಾಂಚೈಸಿಯನ್ನು ಪ್ರತಿನಿಧಿಸಲಿದ್ದಾರೆ. ಬಾರ್ಸಿಲೋನ ಹಾಗೂ ಎಸಿ ಮಿಲನ್ ತಂಡದ ಮಾಜಿ ಆಟಗಾರ ರೊನಾಲ್ಡಿನೊ ಬುಧವಾರ ತಡರಾತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ಬಂದಾಗ ಅವರಿಗಾಗಿ ಕಾದು ಕುಳಿತ್ತಿದ್ದ ಮಾಧ್ಯಮಗಳು ಸುತ್ತುವರಿದವು.
ಬೌನ್ಸರ್ ಹಾಗೂ ಪೊಲೀಸರು ರೊನಾಲ್ಡಿನೊರಿಗೆ ಬಿಗಿ ಭದ್ರತೆಯನ್ನು ನೀಡಿದ್ದರು. ಆದಾಗ್ಯೂ ಫೋಟೊಗಳಿಗೆ ಪೋಸ್ ನೀಡಿದರು.
‘ಪ್ರೀಮಿಯರ್ ಫುಟ್ಸಲ್’ ಫ್ರಾಂಚೈಸಿ ಆಧರಿತ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಗಿದೆ. ಪಂದ್ಯವನ್ನು ಒಳಾಂಗಣದ ಕಿರಿದಾದ ಮೈದಾನದಲ್ಲಿ ಆಡಲಾಗುತ್ತದೆ. ಪ್ರತಿ ತಂಡದಲ್ಲಿ ಐದು ಆಟಗಾರರಿರುತ್ತಾರೆ. ಪಂದ್ಯದ ಸಮಯ 40 ನಿಮಿಷವಾಗಿರುತ್ತದೆ.
ಫುಟ್ಸಲ್ ಟೂರ್ನಿಗೆ ಪೋರ್ಚುಗಲ್‌ನ ಫುಟ್ಬಾಲ್ ದಂತಕತೆ ಲೂಯಿಸ್ ಫಿಗೊ ಅಧ್ಯಕ್ಷರಾಗಿದ್ದಾರೆ. ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಟೂರ್ನಿಯ ರಾಯಭಾರಿಯಾಗಿದ್ದಾರೆ.
ಮೊದಲ ಆವೃತ್ತಿಯ ಫುಟ್ಸಲ್ ಟೂರ್ನಿ ಜು.15 ರಿಂದ ಆರಂಭವಾಗಲಿದ್ದು, ಜು.24 ರಂದು ಗೋವಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ.







