ಟ್ರಂಪ್‌ಗೆ ಅಸ್ಸಾಂ ಚಹಾ ರವಾನಿಸಿದ ಭಾರತೀಯ ಕಂಪೆನಿ
ವಾಶಿಂಗ್ಟನ್, ಜು. 14: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಭಾರತದ ಚಹಾ ಕಂಪೆನಿಯೊಂದು ಪ್ರಸಿದ್ಧ ಅಸ್ಸಾಂ ಗ್ರೀನ್ ಟೀಯ 6,000 ಚೀಲಗಳನ್ನೊಳಗೊಂಡ ಸರಕನ್ನು ಕಳುಹಿಸಿಕೊಟ್ಟಿದೆ. ಜೊತೆಗೆ ಒಂದು ಸಂದೇಶವನ್ನೂ ಇಟ್ಟಿದೆ: ‘‘ನಿಮ್ಮನ್ನು ನೀವು ಶುದ್ಧಗೊಳಿಸುವುದಕ್ಕೆ ಸಮಯ ಮಿತಿ ಎಂಬುದಿಲ್ಲ’’.
‘‘ಪ್ರೀತಿಯ ಟ್ರಂಪ್ ಅವರೇ, ಭಾರತದಿಂದ ನಿಮಗೆ ನಮಸ್ತೆ. ನಾವು ನಿಮಗೆ ಭಾರೀ ಪ್ರಮಾಣದಲ್ಲಿ ನೈಸರ್ಗಿಕ ಹಸಿರು ಚಹಾವನ್ನು ಕಳುಹಿಸುತ್ತಿದ್ದೇವೆ. ಅಪಾಯಕಾರಿ ಫ್ರೀ ರ್ಯಾಡಿಕಲ್ಸ್ ವಿರುದ್ಧ ಅದು ಹೋರಾಡುತ್ತದೆ. ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸಲು ಹಾಗೂ ಆರೋಗ್ಯಪೂರ್ಣ ಸಮತೋಲನವನ್ನು ಮರು ಪಡೆಯಲು ಅದು ಸಹಾಯ ಮಾಡುತ್ತದೆ. ಜನರನ್ನು ಬುದ್ಧಿವಂತರನ್ನಾಗಿಸಿದ ಹೆಗ್ಗಳಿಕೆಯೂ ಅದಕ್ಕಿದೆ. ದಯವಿಟ್ಟು ಹಸಿರು ಚಹಾವನ್ನು ಕುಡಿಯಿರಿ. ನಿಮಗಾಗಿ, ಅಮೆರಿಕಕ್ಕಾಗಿ ಹಾಗೂ ಜಗತ್ತಿಗಾಗಿ’’ ಎಂದು ಕೋಲ್ಕತದ ‘ಟೆ-ಎ-ಮೀ ಟೀಸ್’ ವೀಡಿಯೊ ಸಂದೇಶದಲ್ಲಿ ತಿಳಿಸಿದೆ.
‘‘ಡೊನಾಲ್ಡ್ ಟ್ರಂಪ್ ಇಡೀ ಜಗತ್ತಿಗೆ ಚಿಂತೆ ಹಚ್ಚಿದ್ದಾರೆ. ನಾವು ಅವರನ್ನು ತಡೆಯಲಾರೆವು, ಆದರೆ, ಬಹುಷಃ ನಾವು ಅವರನ್ನು ಬದಲಾಯಿಸಬಹುದು’’ ಎಂದು ಕಂಪೆನಿ ಬುಧವಾರ ಹೇಳಿದೆ.





