ಡೇವಿಸ್ ಕಪ್: ಇಂದು ಭಾರತಕ್ಕೆ ಕೊರಿಯಾ ಎದುರಾಳಿ

ಚಂಡೀಗಢ, ಜು.14: ಏಷ್ಯಾ/ಒಶಿಯಾನಿಯ ಗ್ರೂಪ್-1 ಡೇವಿಸ್ ಕಪ್‌ನಲ್ಲಿ ಆತಿಥೇಯ ಭಾರತ ತಂಡ ಶುಕ್ರವಾರ ಕೊರಿಯಾ ತಂಡವನ್ನು ಎದುರಿಸಲಿದ್ದು, ಪ್ರಮುಖ ಆಟಗಾರರ ಗಾಯದ ಸಮಸ್ಯೆಯ ಹೊರತಾಗಿಯೂ ಭಾರತ ಫೇವರಿಟ್ ತಂಡವಾಗಿದೆ.
ಯೂಕಿ ಭಾಂಬ್ರಿ ಹಾಗೂ ಸೋಮ್‌ದೇವ್ ದೇವರಾಮನ್ ಗಾಯದ ಸಮಸ್ಯೆಗೆ ಸಿಲುಕಿರುವ ಹಿನ್ನೆಲೆಯಲ್ಲಿ ಚೆನ್ನೈನ ಆಟಗಾರ ರಾಮ್ ಕುಮಾರ್ ರಾಮನಾಥನ್‌ಗೆ ಡೇವಿಸ್ ಕಪ್‌ನಲ್ಲಿ ಚೊಚ್ಚಲ ಪಂದ್ಯ ಆಡುವ ಅವಕಾಶ ಲಭಿಸಿದೆ.
ರಾಮನಾಥನ್ ಕೆಲವು ಕಠಿಣ ಪಂದ್ಯಗಳನ್ನು ಜಯಿಸಿದ್ದಾರೆ. ಹಾಗೆಯೇ ಕೆಲವು ಪಂದ್ಯಗಳನ್ನು ಕೂದಲೆಳೆ ಅಂತರದಿಂದ ಕಳೆದುಕೊಂಡಿದ್ದಾರೆ. 21ರ ಹರೆಯದ ರಾಮನಾಥನ್ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ತನಗಿಂತ 200 ಸ್ಥಾನ ಕೆಳಗಿರುವ ಸಿಯೊಂಗ್-ಚಾನ್‌ಹೊಂಗ್‌ರನ್ನು ಎದುರಿಸಲಿದ್ದಾರೆ.
ಡಬಲ್ಸ್‌ನಲ್ಲಿ ಸಾಕೇತ್ ಮೈನೇನಿ ಜೊತೆಗೂಡಿ ಕೊರಿಯಾ ಆಟಗಾರರನ್ನು ಎದುರಿಸಲಿದ್ದಾರೆ. ಮೈನೇನಿ ಡೇವಿಸ್‌ಕಪ್‌ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದು ಕೇವಲ ಒಂದು ಡಬಲ್ಸ್ ಪಂದ್ಯ ಸೋತಿದ್ದಾರೆ. ಇತ್ತೀಚೆಗೆ ಭುಜನೋವಿಗೆ ಒಳಗಾಗಿದ್ದ ಮೈನೇನಿ ಅವರು ದೈಹಿಕವಾಗಿ ಫಿಟ್ ಇರುವುದು ಭಾರತಕ್ಕೆ ನಿರ್ಣಾಯಕವೆನಿಸಿದೆ. ಮೈನೇನಿ-ರಾಜ್‌ಕುಮಾರ್ ಜೋಡಿಗೆ ಸ್ವದೇಶದ ವಾತಾವರಣದ ಲಾಭದ ಜೊತೆಗೆ ಅಭಿಮಾನಿಗಳ ಬೆಂಬಲವೂ ಸಿಗಲಿದೆ.
ಭಾರತದಲ್ಲಿ 2008ರ ಬಳಿಕ ಇದೇ ಮೊದಲ ಬಾರಿ ಹುಲ್ಲು ಹಾಸಿನಲ್ಲಿ ಡೇವಿಸ್ ಕಪ್ ಪಂದ್ಯ ನಡೆಯಲಿದೆ. 8 ವರ್ಷಗಳ ಹಿಂದೆ ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಜಪಾನ್ ತಂಡವನ್ನು 3-2 ಅಂತರದಿಂದ ಸೋಲಿಸಿತ್ತು.
ಕಳಪೆ ಫಾರ್ಮ್ ಹಾಗೂ ಕಾಲುನೋವಿನ ಕಾರಣದಿಂದ ಸೋಮ್‌ದೇವ್ ಈ ಬಾರಿಯ ಡೇವಿಸ್ ಕಪ್‌ನಿಂದ ಹೊರಗುಳಿದಿದ್ದಾರೆ. ಎಐಟಿಎ ಆಯ್ಕೆ ಸಮಿತಿ ಆಟಗಾರರನ್ನು ಸಂಪರ್ಕಿಸಿದ ಬಳಿಕ ಹುಲ್ಲುಹಾಸಿನಲ್ಲಿ ಪಂದ್ಯದ ಆತಿಥ್ಯವಹಿಸಲು ನಿರ್ಧರಿಸಿದೆ.
ಪ್ರಸ್ತುತ ಟೂರ್ನಿಯಲ್ಲಿ ರೋಹನ್ ಬೋಪಣ್ಣ ಹಾಗೂ ಲಿಯಾಂಡರ್‌ಪೇಸ್ ಡಬಲ್ಸ್ ಪಂದ್ಯದಲ್ಲಿ ಆಡಲಿದ್ದಾರೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೋಪಣ್ಣ-ಪೇಸ್ ಜೋಡಿ ಹಾಂಗ್ ಚುಂಗ್ ಹಾಗೂ ಯುನ್‌ಸಿಯೊಂಗ್‌ಚಂಗ್‌ರನ್ನು ಎದುರಿಸಲಿದ್ದಾರೆ.
ಒಲಿಂಪಿಕ್ಸ್‌ನ ಮೊದಲು ಈ ಇಬ್ಬರು ತಮ್ಮ್‌ಳಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ ಎನ್ನುವುದು ಎಐಟಿಎ ಬಯಕೆ. ಬೋಪಣ್ಣಗೆ ಒಲಿಂಪಿಕ್ಸ್‌ನಲ್ಲಿ ಪೇಸ್‌ರೊಂದಿಗೆ ಆಡಲು ಇಷ್ಟವಿರಲಿಲ್ಲ. ಮೈನೇನಿಯೊಂದಿಗೆ ಆಡಬೇಕೆಂಬ ಬೋಪಣ್ಣರ ಬೇಡಿಕೆಯನ್ನು ಎಐಟಿಎ ತಿರಸ್ಕರಿಸಿತ್ತು.
ಈ ಪಂದ್ಯವನ್ನು ಗೆಲ್ಲುವ ತಂಡ ವಿಶ್ವ ಗ್ರೂಪ್‌ಪ್ಲೇ-ಆಫ್‌ಗೆ ತೇರ್ಗಡೆಯಾಗಲಿದೆ. ಚೀನಾ ಅಥವಾ ಉಜ್ಬೇಕಿಸ್ತಾನ ತಂಡವನ್ನು ಎದುರಿಸಲಿದೆ. ಒಂದು ವೇಳೆ ಭಾರತ ಪ್ಲೇ-ಆಫ್‌ಗೆ ತೇರ್ಗಡೆಯಾದರೆ ವಿದೇಶದಲ್ಲಿ ಪಂದ್ಯ ಆಡಲಿದೆ.
ಪಂದ್ಯಕ್ಕೆ ಮಳೆ ಭೀತಿ
ಚಂಡೀಗಢದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ವಾತಾವರಣ ತಂಪಾಗಿದೆ. ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ ಮುದಿನ 2-3 ದಿನಗಳ ಕಾಲ ನಗರದಲ್ಲಿ ಜೋರಾಗಿ ಮಳೆ ಬೀಳಲಿದೆ. ಆದಾಗ್ರೂ, ಡೇವಿಸ್‌ಕಪ್‌ಗೆ ವರುಣ ಕೃಪೆ ತೋರುವನೇ ಎಂದು ಕಾದು ನೋಡಬೇಕಾಗಿದೆ.
ಟೆನಿಸ್ ಹುಲ್ಲುಗಾಸಿನಲ್ಲಿ ನಡೆಯುತ್ತಿರುವುದು ತಾಂತ್ರಿಕವಾಗಿ ಹೆಚ್ಚು ಉತ್ತಮ. ಈ ವಾತಾವರಣದಲ್ಲಿ ಬೇಗನೆ ಹೊಂದಿಕೊಂಡರೆ ಬಹಳಷ್ಟು ಲಾಭವಾಗಲಿದೆ. ನಮಗೆ ಮೋಡ ಕವಿದವಾತಾವರಣದಲ್ಲಿ ಆಡಿದ ಅನುಭವವಿದೆ. ಕೋಲ್ಕತಾದಲ್ಲಿ ಸ್ವಿಟ್ಝರ್ಲೆಂಡ್ ವಿರುದ್ಧ ಆಡುವಾಗಲೂ ಇಂತಹ ವಾತಾವರಣವಿತ್ತು. ತಂಡವಾಗಿ ನಾವೆಲ್ಲರೂ ಪಂದ್ಯಕ್ಕೆ ಸಜ್ಜಾಗಿದ್ದೇವೆ. ನಾಳೆ ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದೇವೆ. ಶುಕ್ರವಾರ ಪಂದ್ಯ ನಡೆಯಲು ಸಾಧ್ಯವಾಗದೇ ಇದ್ದರೆ ಶನಿವಾರ ಎರಡು ಸಿಂಗಲ್ಸ್ ಹಾಗು ಒಂದು ಡಬಲ್ಸ್ ಪಂದ್ಯ ಆಡಬೇಕಾಗಿದೆ ಎಂದು ಹಿರಿಯ ಟೆನಿಸಿಗ ಲಿಯಾಂಡರ್ ಪೇಸ್ ಹೇಳಿದ್ದಾರೆ.
ಡೇವಿಸ್ ಕಪ್ ಕ್ವಾರ್ಟರ್‌ಫೈನಲ್: ಜೊಕೊವಿಕ್, ಮರ್ರೆ ಅಲಭ್ಯ
ಪ್ಯಾರಿಸ್, ಜು.14: ಈ ವಾರಾಂತ್ಯದಲ್ಲಿ ಡೇವಿಸ್ ಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿವೆ. ಸೂಪರ್‌ಸ್ಟಾರ್‌ಗಳಾದ ನೊವಾಕ್ ಜೊಕೊವಿಕ್ ಹಾಗೂ ಆ್ಯಂಡಿ ಮರ್ರೆ ಅಂತಿಮ-8ರ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ವಿಶ್ವದ ನಂ.1 ಆಟಗಾರ ಜೊಕೊವಿಕ್ ಹಾಗೂ ವಿಂಬಲ್ಡನ್‌ನ ನೂತನ ಚಾಂಪಿಯನ್ ಮರ್ರೆ ಕ್ರಮವಾಗಿ ಸರ್ಬಿಯ ಹಾಗೂ ಹಾಲಿ ಚಾಂಪಿಯನ್ ಗ್ರೇಟ್ ಬ್ರಿಟನ್ ಪರ ಆಡಬೇಕಾಗಿತ್ತು.
ವಿಂಬಲ್ಡನ್ ಟೂರ್ನಿಯಲ್ಲಿ ಅಮೆರಿಕದ ಸ್ಯಾಮ್ ಕೆರ್ರಿ ವಿರುದ್ಧ ಮೂರನೆ ಸುತ್ತಿನಲ್ಲಿ ಸೋತು ಆಘಾತ ಅನುಭವಿಸಿರುವ ಜೊಕೊವಿಕ್ ಡೇವಿಸ್ ಕಪ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದರು.
ವಿಶ್ವದ ನಂ.2ನೆ ಆಟಗಾರ ಮರ್ರೆ ಶುಕ್ರವಾರ-ರವಿವಾರ ಬೆಲ್‌ಗ್ರೆಡ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಭ್ಯವಿರುವುದಿಲ್ಲ.
ಮುಂಬರುವ ಒಲಿಂಪಿಕ್ಸ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಮರ್ರೆ ವಿಶ್ರಾಂತಿ ಪಡೆಯಲು ಬಯಸಿದ್ದಾರೆ ಎಂದು ಬ್ರಿಟನ್ ತಂಡದ ನಾಯಕ ಲಿಯೊನ್ ಸ್ಮಿತ್ ಬಿಬಿಸಿಗೆ ತಿಳಿಸಿದ್ದಾರೆ.
ಮರ್ರೆ ಅನುಪಸ್ಥಿತಿಯಲ್ಲಿ ಕೈಲ್ ಎಡ್ಮಂಡ್ ಹಾಗೂ ಜೇಮ್ಸ್ ವಾರ್ಡ್ ಬ್ರಿಟನ್ ಸವಾಲನ್ನು ಮುನ್ನಡೆಸಲಿದ್ದಾರೆ. ಜೊಕೊವಿಕ್ ಅನುಪಸ್ಥಿತಿಯಲ್ಲಿ 2010ರ ಚಾಂಪಿಯನ್ ಸರ್ಬಿಯ ತಂಡವನ್ನು ವಿಕ್ಟರ್ ಟ್ರೊಸ್ಕಿ ಹಾಗೂ ಡುಸಾನ್ ಲಾಜೊವಿಕ್ ನಾಯಕತ್ವವಹಿಸಿಕೊಳ್ಳಲಿದ್ದಾರೆ.







