ಅಗ್ರ-20ಕ್ಕೆ ಪ್ರವೇಶಿಸಿದ ಜಯರಾಮ್
ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್

ಕೌಲಾಲಂಪುರ, ಜು.14: ಇತ್ತೀಚೆಗೆ ನಡೆದ ಯುಎಸ್ ಓಪನ್ ಜಿಪಿ ಗೋಲ್ಡ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಭಾರತದ ಶಟ್ಲರ್ ಅಜಯ್ ಜಯರಾಮ್ ಗುರುವಾರ ಇಲ್ಲಿ ಬಿಡುಗಡೆಯಾದ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲಕ್ಕೇರಿ ಅಗ್ರ-20ರಲ್ಲಿ ಸ್ಥಾನ ಪಡೆದಿದ್ದಾರೆ.
43673 ಅಂಕ ಗಳಿಸಿರುವ ಜಯರಾಮ್ 20ನೆ ಸ್ಥಾನದಲ್ಲಿದ್ದಾರೆ. ಚೊಚ್ಚಲ ಕೆನಡಾ ಓಪನ್ ಜಯಿಸಿರುವ ಬಿ.ಸಾಯಿಪ್ರಣೀತ್ ಕಳೆದ ವಾರ ನಡೆದ ಅಮೆರಿಕ ಓಪನ್‌ನಲ್ಲಿ ಬೇಗನೆ ಹೊರ ನಡೆದ ಕಾರಣ ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದು, 35ನೆ ಸ್ಥಾನದಲ್ಲಿದ್ದಾರೆ.
ಇತರ ಪುರುಷ ಸಿಂಗಲ್ಸ್ ಆಟಗಾರರಾದ ಶ್ರೀಕಾಂತ್, ಸಮೀರ್ ವರ್ಮ ಹಾಗೂ ಎಸ್.ಎಸ್. ಪ್ರಣಯ್ ಕ್ರಮವಾಗಿ 11ನೆ, 38ನೆ ಹಾಗೂ 29ನೆ ಸ್ಥಾನದಲ್ಲಿದ್ದಾರೆ.
ಯುಎಸ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಜಯರಾಮ್ ವಿರುದ್ಧ ಸೋತಿದ್ದ ಆನಂದ್ ಪವಾರ್ 16 ಸ್ಥಾನ ಮೇಲಕ್ಕೇರಿದ್ದು 77ನೆ ರ್ಯಾಂಕ್ ತಲುಪಿದ್ದಾರೆ.
ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಕ್ರಮವಾಗಿ 5ನೆ ಹಾಗೂ 10ನೆ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.





