ಹರ್ಯಾಣದ ಸರಳ ಮುಖ್ಯಮಂತ್ರಿಗೆ ಒಂದೂವರೆ ಕೋಟಿಯ ಲ್ಯಾಂಡ್ ಕ್ರೂಸರ್ ಕಾರು
![ಹರ್ಯಾಣದ ಸರಳ ಮುಖ್ಯಮಂತ್ರಿಗೆ ಒಂದೂವರೆ ಕೋಟಿಯ ಲ್ಯಾಂಡ್ ಕ್ರೂಸರ್ ಕಾರು ಹರ್ಯಾಣದ ಸರಳ ಮುಖ್ಯಮಂತ್ರಿಗೆ ಒಂದೂವರೆ ಕೋಟಿಯ ಲ್ಯಾಂಡ್ ಕ್ರೂಸರ್ ಕಾರು](https://www.varthabharati.in/sites/default/files/images/articles/2016/07/15/download.jpg)
ಚಂಡೀಗಢ, ಜು.15: ಸರಳ ಜೀವನಶೈಲಿಗೆ ಹೆಸರಾದ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಇದೀಗ 1.35 ಕೋಟಿ ರೂಪಾಯಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಓಡಾಡುತ್ತಿದ್ದಾರೆ!. ಇದುವರೆಗಿನ ಯಾವುದೇ ಮುಖ್ಯಮಂತ್ರಿಗೆ ವಾಹನ ಖರೀದಿ ಮಾಡಲು ಹರ್ಯಾಣ ಸರಕಾರ ಮಾಡಿದ ಗರಿಷ್ಠ ವೆಚ್ಚ ಇದಾಗಿದೆ.
ಇದರ ಜೊತೆಗೆ ಇದನ್ನು ಗುಂಡುನಿರೋಧಕವಾಗಿಸಲು 35-40 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಇವರಿಗೆ ಇರುವ ಅಪಾಯವನ್ನು ಪರಿಗಣಿಸಿ ಈ ಬಗ್ಗೆ ಪೊಲೀಸರು ನಿರ್ಧಾರ ಕೈಗೊಳ್ಳಬೇಕಾಗಿದೆ. ಇದುವರೆಗೂ ಖಟ್ಟರ್ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಓಡಾಡುತ್ತಿದ್ದರು. ಇದನ್ನು 2007ರಲ್ಲಿ ಖರೀದಿಸಲಾಗಿತ್ತು. ಅದು ಹಿಂದಿನ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಬಳಸುತ್ತಿದ್ದ ಕಾರು.
ಮರ್ಸಿಡಿಸ್ ಬೆಂಝ್ ವಾಹನಕ್ಕೆ ಸುಮಾರು 95 ಲಕ್ಷ ರೂ. ವೆಚ್ಚವಾಗುತ್ತದೆ. ಹರ್ಯಾಣ ಸಚಿವರಿಗೆ ಹೊಂಡಾ ಸಿಆರ್ವಿ ಹಾಗೂ ಟೊಯೊಟಾ ಕ್ಯಾಮ್ರಿಯಂಥ ಕಾರು ನೀಡಲಾಗುತ್ತಿದ್ದು, ಇದಕ್ಕೆ 25-30 ಲಕ್ಷ ಬೆಲೆ ಇದೆ. ಹಿರಿಯ ಐಎಎಸ್ ಅಧಿಕಾರಿಗಳ ವಾಹನಗಳಿಗೆ 15 ಲಕ್ಷ ರೂಪಾಯಿಯ ಗರಿಷ್ಠ ಮಿತಿ ಇದೆ.
ಹಿಂದೆ ಬಸ್ಸು, ರೈಲು ಹಾಗೂ ದ್ವಿಚಕ್ರ ವಾಹನದಲ್ಲೂ ಓಡಾಡುತ್ತಿದ್ದ ಖಟ್ಟರ್ ಅವರಿಗಾಗಿ ಇದೀಗ ಇಷ್ಟು ದುಬಾರಿ ಕಾರು ಖರೀದಿಸಿರುವುದು ಅವರ ನಿಕಟವರ್ತಿಗಳಿಗೆ ಅಚ್ಚರಿ ತಂದಿದೆ. ಆದರೆ ತಾವೆಂದೂ ಇಂಥ ಐಷಾರಾಮಿ ಕಾರಿಗೆ ಆಗ್ರಹಿಸಿರಲಿಲ್ಲ ಎಂದು ಖಟ್ಟರ್ ಹೇಳಿಕೊಳ್ಳುತ್ತಾರೆ. ಸಿಎಂ ಅವರ ವಿಚಾರಗಳನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳ ನಿರ್ಧಾರ ಇದು. ಈ ಕಾರು ಖರೀದಿ ನಿರ್ಧಾರವನ್ನು ಅವರೇ ಕೈಗೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ನಾನು ಇದನ್ನು ಕಲ್ಪಿಸಿಕೊಳ್ಳಲೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.