ಹೊಸದಿಲ್ಲಿ: ಕೇರಳದ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂ. ಕೊಳ್ಳೆ ಹೊಡೆದ ಆನ್ಲೈನ್ ವಂಚಕರ ಬಂಧನ

ಹೊಸದಿಲ್ಲಿ, ಜುಲೈ 15: ಬ್ಯಾಂಕ್ ಖಾತೆಯ ಮಾಹಿತಿಸೋರಿಕೆ ಮಾಡಿ ಕೇರಳದ ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ದೋಚಿದ ಆನ್ಲೈನ್ ವಂಚಕ ತಂಡದ ಪ್ರಧಾನ ಸೂತ್ರಧಾರನನ್ನು ದಿಲ್ಲಿಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಸೆಂಟ್ರಲ್ ದಿಲ್ಲಿಯ ಪಟೇಲ್ ನಗರ್ನ ಸೌರಬ್, ರಿಶಿನಾರುಲ್ಲ ಬಂಧಿತ ಆರೋಪಿಗಳಾಗಿದ್ದು ಐದು ರಾಷ್ಟ್ರೀಕೃತ ಬ್ಯಾಂಕ್ಗಳ ಡಾಟಬೇಸ್ ಮಾಹಿತಿ ಸೋರಿಕೆ ಮಾಡಿ ಒಂದು ವರ್ಷದಲ್ಲಿ ಇವರು ಕೋಟ್ಯಂತರ ಹಣ ಅಪಹರಿಸಿದ್ದಾರೆಂದು ತಿಳಿದು ಬಂದಿದೆ.
ಹಣಕಳಕೊಂಡವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೇರಳದ ಸೈಬರ್ ಕ್ರೈಂಬ್ರಾಂಚ್ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಆಧಾರವಾಗಿಟ್ಟುನಡೆಸಿದ ತನಿಖೆಯಲ್ಲಿ ಆರೋಪಿಗಳು ದಿಲ್ಲಿಯಲ್ಲಿರುವುದು ಪತ್ತೆಯಾಗಿತ್ತು. ನಂತರ ದಿಲ್ಲಿ ಪೊಲೀಸರ ನೆರವಿನಿಂದ ಇವರನ್ನು ಬಂಧಿಸಿ ತೀಸ್ಹಝಾರಿ ಕೋರ್ಟ್ಗೆ ಹಾಜರು ಪಡಿಸಲಾಗಿದೆ. ಮುಂದಿನ ವಿಚಾರಣೆಯ ನಂತರ ಈ ಗ್ಯಾಂಗ್ನ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ಹೇಳಿದ್ದಾರೆಂದು ವರದಿ ತಿಳಿಸಿದೆ.
Next Story