ವಿಂಡೀಸ್ ಆಲ್‌ರೌಂಡರ್ ರಸ್ಸ್ಸೆಲ್‌ಗೆ 2 ವರ್ಷ ನಿಷೇಧ ಭೀತಿ

ಜಮೈಕಾ, ಜು.15: ಕಳೆದ 12 ತಿಂಗಳ ಅವಧಿಯಲ್ಲಿ ಮೂರು ಬಾರಿ ಡೋಪಿಂಗ್ ಟೆಸ್ಟ್‌ನಿಂದ ತಪ್ಪಿಸಿಕೊಂಡಿರುವ ವೆಸ್ಟ್‌ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಆ್ಯಂಡ್ರೆ ರಸ್ಸ್ಸೆಲ್ 2 ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯದಿಂದ ನಿಷೇಧಕ್ಕೆ ಗುರಿಯಾಗುವ ಭೀತಿಯಲ್ಲಿದ್ದಾರೆ.
ರಸ್ಸ್ಸೆಲ್ ಮುಂದಿನ ವಾರ ವಿಚಾರಣೆ ಎದುರಿಸಲಿದ್ದಾರೆ. 2016ರ ಮಾರ್ಚ್-ಎಪ್ರಿಲ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ತಂಡ ಚಾಂಪಿಯನ್‌ಪಟ್ಟಕ್ಕೇರಲು ರಸ್ಸ್ಸೆಲ್ ಪ್ರಮುಖ ಪಾತ್ರವಹಿಸಿದ್ದ ರಸ್ಸ್ಸೆಲ್ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಮೈಕಾ ತಂಡದಲ್ಲಿ ಆಡುತ್ತಿದ್ದಾರೆ.
‘ಇರುವಿಕೆಯ ಷರತ್ತು’ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ರಸ್ಸಲ್ ಜು.20 ರಂದು ಜಮೈಕಾದಲ್ಲಿ ಡೋಪಿಂಗ್ ವಿರೋಧಿ ಸ್ವತಂತ್ರ ಶಿಸ್ತು ಸಮಿತಿಯಿಂದ ಪ್ರಶ್ನಿಸಲ್ಪಡಲಿದ್ದಾರೆ ಎಂದು ರಸ್ಸ್ಸೆಲ್ ವಕೀಲರಾದ ಪ್ಯಾಟ್ರಿಕ್ ಫೋಸ್ಟರ್ ಹೇಳಿದ್ದಾರೆ.
ಡೋಪಿಂಗ್ ಕಾನೂನಿನ ಪ್ರಕಾರ ಡೋಪಿಂಗ್ ಟೆಸ್ಟ್ ತಪ್ಪಿಸಿಕೊಳ್ಳುವುದು ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಸಮಾನ. ವಾಡಾ ನೀತಿ ಸಂಹಿತೆ ಅಡಿಯಲ್ಲಿ ಸ್ಥಳೀಯ ಡೋಪಿಂಗ್ ತಡೆ ಏಜೆನ್ಸಿ ಡೋಪಿಂಗ್ ಟೆಸ್ಟ್ ನಡೆಸುತ್ತದೆ. ಟೆಸ್ಟ್‌ನ್ನು ಪದೇ ಪದೇ ತಪ್ಪಿಸಿಕೊಂಡರೆ ಎರಡು ವರ್ಷ ನಿಷೇಧ ಎದುರಿಸಬೇಕಾಗುತ್ತದೆ ಎಂದು ಜಮೈಕಾ ಡೋಪಿಂಗ್ ವಿರೋಧಿ ಕಮಿಶನ್ ಹೇಳಿದೆ.
ಎರಡು ವಾರಗಳ ಹಿಂದೆ ರಸ್ಸ್ಸೆಲ್ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಅಧಿಸೂಚನೆ ಪಡೆದಿದ್ದೇವೆ. ಈ ಪ್ರಕರಣದ ವಿಚಾರಣೆಗೆ ನಾವು ಸ್ವತಂತ್ರ ಸಮಿತಿಯೊಂದನ್ನು ರಚಿಸಿದ್ದೇವೆ ಎಂದು ಜಮೈಕಾ ಸ್ವತಂತ್ರ ಶಿಸ್ತು ಸಮಿತಿ ಅಧ್ಯಕ್ಷ ಕೆಂಟ್ ಪಾಂಟ್ರಿ ಮಾ.2 ರಂದು ಹೇಳಿಕೆ ನೀಡಿದ್ದರು.
27ರ ಹರೆಯದ ರಸ್ಸ್ಸೆಲ್ ಇತ್ತೀಚೆಗಿನ ದಿನಗಳಲ್ಲಿ ಟ್ವೆಂಟಿ-20 ಕ್ರಿಕೆಟ್‌ನ ಪ್ರಮುಖ ಆಟಗಾರ. ವಿಶ್ವದೆಲ್ಲೆಡೆ ನಡೆಯುವ ದೇಶೀಯ ಟಿ-20 ಲೀಗ್‌ಗಳಲ್ಲೂ ರಸ್ಸ್ಸೆಲ್ ಪ್ರಮುಖ ಆಟಗಾರ.
2015-16ರ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ತಂಡ ಹಾಗೂ ಫೆಬ್ರವರಿಯಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡ ಟ್ರೋಫಿ ಜಯಿಸುವಲ್ಲಿ ರಸ್ಸ್ಸೆಲ್ ಕೊಡುಗೆ ನೀಡಿದ್ದರು. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.







