ನ.9ರಿಂದ ಫೆ.1ರ ತನಕ ಭಾರತ-ಇಂಗ್ಲೆಂಡ್ ಪ್ರವಾಸ ಸರಣಿ
ಬೆಂಗಳೂರಿನಲ್ಲಿ 3ನೆ ಟ್ವೆಂಟಿ-20 ಪಂದ್ಯ, ರಾಜ್‌ಕೋಟ್‌ನಲ್ಲಿ ಮೊದಲ ಟೆಸ್ಟ್

ಹೊಸದಿಲ್ಲಿ, ಜು.15: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ , ಏಕದಿನ ಮತ್ತು ಟ್ವೆಂಟಿ-20 ಪಂದ್ಯಗಳ ಪ್ರವಾಸ ಸರಣಿಯ ವೇಳಾಪಟ್ಟಿ ಶನಿವಾರ ಪ್ರಕಟಗೊಂಡಿದ್ದು, ಮೊದಲ ಟೆಸ್ಟ್ ನವೆಂಬರ್ 9ರಿಂದ 13ರ ತನಕ ರಾಜ್‌ಕೋಟ್‌ನಲ್ಲಿ ನಡೆಯಲಿದೆ.
ಮೂರು ತಿಂಗಳ ಸುದೀರ್ಘ ಅವಧಿಯ ಪ್ರವಾಸ ಸರಣಿಯಲ್ಲಿ ಐದು ಟೆಸ್ಟ್, ಮೂರು ಏಕದಿನ ಮತ್ತು 3 ಟ್ವೆಂಟಿ-20 ಸರಣಿ ನಿಗದಿಯಾಗಿದೆ.
ಪ್ರವಾಸ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಪ್ರವಾಸ ಸರಣಿ ಮುಂದಿನ ವರ್ಷದ ಫೆಬ್ರವರಿ 1ರ ತನಕ ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಪುಣೆಯಲ್ಲಿ ಜನವರಿ 15ರಂದು ನಡೆಯಲಿದೆ. ಟೆಸ್ಟ್ ಸರಣಿ ಮುಗಿದ ಬಳಿಕ ಇಂಗ್ಲೆಂಡ್ ತಂಡ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಲಿದೆ. ಬಳಿಕ 2017ರ ಜನವರಿಯಲ್ಲಿ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ.
ಭಾರತ 2016-17ರಲ್ಲಿ 24 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದು, ಇದರಲ್ಲಿ 13 ಟೆಸ್ಟ್ ಪಂದ್ಯಗಳ ಸರಣಿ ಒಳಗೊಂಡಿದೆ.
1979-80ರಲ್ಲಿ ಭಾರತ ಗರಿಷ್ಠ ಪಂದ್ಯಗಳ ಸರಣಿಯನ್ನಾಡಿತ್ತು. ಸೆಪ್ಟಂಬರ್ 1979ರಿಂದ ಫೆಬ್ರವರಿ 1980ರ ತನಕ ಭಾರತ ಆಸ್ಟ್ರೇಲಿಯ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಯನ್ನಾಡಿತ್ತು. ಆ ಸರಣಿಯಲ್ಲಿ ಭಾರತ 10 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಇದರಲ್ಲಿ ಭಾರತ 5 ಟೆಸ್ಟ್‌ನಲ್ಲಿ ಜಯ ಮತ್ತು 5 ಟೆಸ್ಟ್‌ನಲ್ಲಿ ಸೋಲು ಅನುಭವಿಸಿತ್ತು.
2016-17ರಲ್ಲಿ ಬಾಂಗ್ಲಾದೇಶ ತಂಡ ಮೊದಲ ಬಾರಿ ಭಾರತದ ಮಣ್ಣಿನಲ್ಲಿ ಟೆಸ್ಟ್ ಸರಣಿಯನ್ನಾಡಲಿದೆ. ನ್ಯೂಝಿಲೆಂಡ್ ವಿರುದ್ಧ ಮೂರು ಮತ್ತು ಇಂಗ್ಲೆಂಡ್ ವಿರುದ್ಧ ಐದು ಮತ್ತು ಆಸ್ಟ್ರೇಲಿಯ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. 1986-87ರಲ್ಲಿ ಭಾರತ ತವರಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಉಳಿದಂತೆ ಯಾವುದೇ ವರ್ಷದಲ್ಲಿ ಗರಿಷ್ಠ 2ರಿಂದ 9 ಟೆಸ್ಟ್ ಪಂದ್ಯಗಳು ನಡೆದಿತ್ತು. ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಎರಡನೆ ಸ್ಥಾನದಲ್ಲಿದೆ. ಭಾರತ ಮುಂದಿನ ಜುಲೈ-ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್‌ಗಳ ಸರಣಿಯನ್ನಾಡಳಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳಾ ಪಟ್ಟಿ
ಟೆಸ್ಟ್ ಸರಣಿ
ನ.09-13: ಮೊದಲ ಕ್ರಿಕೆಟ್ ಟೆಸ್ಟ್, ರಾಜ್‌ಕೋಟ್
ನ.17-21: ಎರಡನೆ ಕ್ರಿಕೆಟ್ ಟೆಸ್ಟ್, ವಿಶಾಖಪಟ್ಟಣ
ನ.26-30: ಮೂರನೆ ಕ್ರಿಕೆಟ್ ಟೆಸ್ಟ್, ಮೊಹಾಲಿ
ಡಿ.08-12: ನಾಲ್ಕನೆ ಕ್ರಿಕೆಟ್ ಟೆಸ್ಟ್, ಮುಂಬೈ
ಡಿ..16-20: ಐದನೆ ಕ್ರಿಕೆಟ್ ಟೆಸ್ಟ್, ಚೆನ್ನೈ
ಏಕದಿನ ಸರಣಿ
ಜ.15: ಮೊದಲ ಏಕದಿನ ಪಂದ್ಯ, ಪುಣೆ
ಜ.19: ಎರಡನೆ ಏಕದಿನ ಪಂದ್ಯ, ಕಟಕ್
ಜ.03: ಮೂರನೆ ಏಕದಿನ ಪಂದ್ಯ, ಕೋಲ್ಕತಾ
ಟ್ವೆಂಟಿ-20 ಸರಣಿ
ಜ.26: ಮೊದಲ ಟ್ವೆಂಟಿ-20 ಪಂದ್ಯ, ಕಾನ್ಪುರ
ಜ.29: ಎರಡನೆ ಟ್ವೆಂಟಿ-20 ಪಂದ್ಯ, ನಾಗ್ಪುರ
ಫೆ.01: ಮೂರನೆ ಟ್ವೆಂಟಿ-20 ಪಂದ್ಯ, ಬೆಂಗಳೂರು







