ಅಂಬಾಗಿಲು-ಮಣಿಪಾಲ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ

ಉಡುಪಿ, ಜು.15: ಅಂಬಾಗಿಲು- ಮಣಿಪಾಲ- ಉದ್ಯಾವರ- ಮಲ್ಪೆ ರಸ್ತೆಯ ಮೊದಲ ಹಂತದ ಚತುಷ್ಪಥ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ಮಣಿಪಾಲ ಕಂಟ್ರಿ ಇನ್ ಹೊಟೇಲ್ ಸಮೀಪ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಯೋಜನೆಯಡಿ ಸುಮಾರು 4.40 ಕೋ.ರೂ. ವೆಚ್ಚದಲ್ಲಿ ಕಂಟ್ರಿ ಇನ್ ಹೊಟೇಲಿನಿಂದ ಪೆರಂಪಳ್ಳಿ ರಸ್ತೆಯ 1.2 ಕಿ.ಮೀ. ಉದ್ದದ ಹಾಗೂ 15 ಮೀ. ಅಗಲದ ಚತುಷ್ಪಥ ಕಾಮಗಾರಿಯನ್ನು ಮೊದಲ ಹಂತ ದಲ್ಲಿ ಕೈಗೆತ್ತಿಕೊಳ್ಳಲಾಗುವುದು. 2ನೆ ಹಂತದಲ್ಲಿ ಈ ರಸ್ತೆಯ ಚತುಷ್ಪಥ ಕಾಮಗಾರಿಯನ್ನು ಎರಡು ಕಿ.ಮೀ.ವರೆಗೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ರಸ್ತೆಯಲ್ಲಿ ಮಠದ ಜಾಗವೊಂದು ಹೊರತುಪಡಿಸಿ ಉಳಿದ ಎಲ್ಲ ಜಾಗಗಳು ಸರಕಾರಿಯಾಗಿದ್ದು, ಭೂಸ್ವಾಧೀನದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದರಿಂದ ಕಾಮಗಾರಿ ತ್ವರಿತಗತಿಯಲ್ಲಿ ಆರಂಭಗೊಂಡು ಜನವರಿ ತಿಂಗ ಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವ ಪ್ರಮೋದ್ ಹೇಳಿದರು.
ಈ ಸಂದರ್ಭ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಪಂ ಸದಸ್ಯರಾದ ಜನಾರ್ದನ ತೋನ್ಸೆ, ಸುಧಾಕರ್ ಶೆಟ್ಟಿ, ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷೆ ವರೋನಿಕಾ ಕರ್ನೆಲಿಯೊ, ಪೌರಾಯುಕ್ತ ಡಿ.ಮಂಜುನಾಥಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಭಟ್, ಸದಸ್ಯರಾದ ಸೆಲಿನಾ ಕರ್ಕಡ, ರಮೇಶ್ ಕಾಂಚನ್, ಜನಾರ್ದನ ಭಂಡಾರ್ಕರ್, ಯುವರಾಜ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎಸ್.ಕೆ. ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ವಿ.ಹೆಗ್ಡೆ, ಇಂಜಿನಿಯರ್ ಸೋಮನಾಥ್, ಅಮೃತ್ ಶೆಣೈ, ದಿನೇಶ್ ಪುತ್ರನ್, ಗಣೇಶ್‌ರಾಜ್ ಸರಳಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.







