ಟರ್ಕಿಯಲ್ಲಿ ಕ್ಷಿಪ್ರ ಸೇನಾ ಕ್ರಾಂತಿ ?

ಅಂಕಾರ, ಜು . 16: ಟರ್ಕಿಯಲ್ಲಿ ಶನಿವಾರ ಮುಂಜಾನೆ ನಡೆದ 'ಕ್ಷಿಪ್ರ ಕ್ರಾಂತಿ'ಯೊಂದರಲ್ಲಿ ಅಲ್ಲಿಯ ಸೇನೆಯ ಗುಂಪೊಂದು ತಾನು ದೇಶದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇನೆ ಎಂದು ಟಿವಿಯಲ್ಲಿ ಹೇಳಿದೆ.ಅಂಕಾರದ ಸಂಸತ್ ಭವನದಲ್ಲಿ ಎರಡು ಸ್ಫೋಟದ ಶಬ್ದ ಕೇಳಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ. ಆದರೆ ದೇಶದ ಅಧ್ಯಕ್ಷ ರಸೆಪ್ ತಯ್ಯಿಬ್ ಎರ್ದೋಗಾನ್ ಅವರು " ಇದು ಕೇವಲ ಸಣ್ಣ ಸಂಖ್ಯೆಯ ಜನರ ಪ್ರಯತ್ನವಾಗಿದ್ದು ತಾವು ಇದನ್ನು ಎದುರಿಸಿ ಸೋಲಿಸುವುದಾಗಿ" ಹೇಳಿದ್ದಾರೆ. ಆದರೆ ಈ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.ಅಂಕಾರದ ಬೀದಿಗಳಲ್ಲಿ ಸೇನಾ ತುಕಡಿಗಳು ಹಾಗೂ ಜನರ ನಡುವೆ ಸಂಘರ್ಷ ನಡೆಯುತ್ತಿರುವ ದೃಶ್ಯಗಳನ್ನು ಟಿ.ವಿ ವಾಹಿನಿಗಳು ಪ್ರಸಾರ ಮಾಡುತ್ತಿವೆ.
ದೇಶದಲ್ಲಿ ಈಗ " ಪೀಸ್ ಕೌನ್ಸಿಲ್ " ನ ಆಡಳಿತವಿದೆ ಹಾಗು ಕರ್ಫ್ಯೂ ಹಾಗೂ ಸೇನಾ ಕಾನೂನು ಜಾರಿಗೆ ಬಂದಿದೆ ಎಂದು ಟಿವಿ ಪ್ರಕಟಣೆಯೊಂದು ತಿಳಿಸಿದೆ. ಇಸ್ತಾಂಬುಲ್ ನ ಪ್ರಮುಖ ಸರಕಾರಿ ಪ್ರದೇಶಗಳಲ್ಲಿ ಸೈನಿಕರು ನಿಂತಿದ್ದು, ಸೇನಾ ಟ್ಯಾಂಕರ್ಗಳು ಬೀದಿಗಿಳಿದಿವೆ ಹಾಗೂ ರಾಜಧಾನಿಯಲ್ಲಿ ಸೇನಾ ಯುದ್ಧ ವಿಮಾನಗಳು ಹಾರಾಡುತ್ತಿವೆ ಎಂದು ಬಿಬಿಸಿ ಹಾಗೂ ಸಿಎನೆನ್ ವರದಿ ತಿಳಿಸಿದೆ.
ರಾಷ್ಟ್ರೀಯ ಬೇಹು ಇಲಾಖೆ ಇಡೀ ಕ್ಷಿಪ್ರ ಕ್ರಾಂತಿಯನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದೆ. ದೇಶದಲ್ಲಿ ಒಟ್ಟಾರೆ ಗೊಂದಲದ ವಾತಾವರಣ ಉಂಟಾಗಿದ್ದು ಸದ್ಯ ಯಾರು ಆಡಳಿತದ ನಿಯಂತ್ರಣ ಹೊಂದಿದ್ದಾರೆ ಎಂದು ಸ್ಪಷ್ಟವಾಗಿಲ್ಲ.
ಈ ಸೇನಾ ಗುಂಪಿಗೆ ಎಷ್ಟು ಬೆಂಬಲವಿದೆ ಹಾಗೂ ಯಾರು ಇದರ ನಾಯಕ ಎಂದು ಇನ್ನೂ ಖಚಿತವಾಗಿಲ್ಲ. ಈ ನಡುವೆ ಕೆಲವು ಹಿರಿಯ ಸೇನಾಧಿಕಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಹೇಳಲಾಗಿದೆ.
ಟರ್ಕಿಯ ಎಲ್ಲರೂ " ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾದ ಸರಕಾರಕ್ಕೆ ಬೆಂಬಲ ನೀಡಬೇಕು " ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕರೆ ನೀಡಿದ್ದಾರೆ. ನ್ಯಾಟೋ ಕೂಡ ಇದೇ ರೀತಿ ಹೇಳಿದೆ.
ಅಧ್ಯಕ್ಷ ಎರ್ದೋಗಾನ್ ಅವರು ದೇಶದ ಮರ್ಮರಿಸ್ ದ್ವೀಪದಲ್ಲಿ ರಜಾದಿನಗಳನ್ನು ಕಳೆಯಲು ಹೋಗಿದ್ದ ಸಂದರ್ಭದಲ್ಲಿ ಈ ' ಕ್ರಾಂತಿ ' ನಡೆದಿದೆ. ಈಗ ಅಧ್ಯಕ್ಷರು ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ. " ತಾನು ಅಂಕಾರ ತಲುಪಲಿದ್ದೇನೆ. ಜನರು ವಿಮಾನ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸೇರಬೇಕು. ಜನಶಕ್ತಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. ಈ ದುಷ್ಕ್ರತ್ಯಕ್ಕೆ ಕೈ ಹಾಕಿದವರು ಬಹುದೊಡ್ಡ ಬೆಲೆ ತೆರಲಿದ್ದಾರೆ " ಎಂದು ಎರ್ದೋಗಾನ್ ಅವರ ಪ್ರಕಟಣೆ ತಿಳಿಸಿದೆ.







