ದೆಹಲಿಯಲ್ಲಿ ಮಂಗಳೂರು ಮೂಲದ ಉಗ್ರರ ಬಂಧನ!
'ಸ್ಪೋಟಕ ವರದಿ'ಯ ಹಿಂದಿನ ಸತ್ಯ

ಹೀಗೊಂದು ತಲೆಬರಹದಲ್ಲಿ ರಾಜ್ಯದ ಪ್ರಮುಖ ನಂಬರ್ ವನ್ ಪತ್ರಿಕೆಯ ಮುಖಪುಟದಲ್ಲಿ ಸುದ್ದಿ ಪ್ರಕಟವಾಗಿದೆ. ಮಂಗಳೂರು ಸಮೀಪದ ವಿಟ್ಲ ಹಾಗೂ ಉಪ್ಪಿನಂಗಡಿ ಭಾಗದ ನಾಲ್ಕು ಮಂದಿ ದೆಹಲಿ ಪೊಲೀಸರ ಸೆರೆಯಲ್ಲಿದ್ದಾರೆ ಎಂಬ ಎಕ್ಸ್ ಕ್ಲೂಸಿವ್ ನ್ಯೂಸ್! ಉಗ್ರರ ಜಾಡು ಕರಾವಳಿಯ ಗಡಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದೆಯೆಂಬ ಸ್ಪೋಟಕ ಮಾಹಿತಿ. ಐಎಸ್ಐ, ಹಿಜ್ಬುಲ್ ಮೊದಲಾದ ಉಗ್ರಸಂಘಟನೆಗಳ ಜೊತೆ ಕರಾವಳಿ ನಂಟು ಎಂಬ ಭಯಾನಕ ಸುದ್ದಿ. ನಿರಂತರ 2-3 ದಿನಗಳ ಕಾಲ ಅದು ಪತ್ರಿಕೆಯ ಬಾಕ್ಸ್ ಐಟಂ ಲೀಡಿಂಗ್ ನ್ಯೂಸ್. ಪತ್ರಿಕೆಯ ಹಿರಿಯ ಪ್ರತಿನಿಧಿಯಿಂದ ನಂಬಲಸಾಧ್ಯವಾದ ವರದಿ.
ಇದು ಪ್ರಕಟವಾದದ್ದು 2001 ರಲ್ಲಿ. ಆವಾಗ ನಾನು ಅದೇ ಪತ್ರಿಕೆಯ ವರದಿಗಾರ. ವಿಟ್ಲದ ಉಗ್ರರು ಎಂದಾಗ ನಾನು ವಿಟ್ಲದವನಾದ ಕಾರಣ ಸಹಜವಾಗಿಯೇ ಕುತೂಹಲ ಮೂಡಿತ್ತು. ಸುದ್ದಿಯ ಜಾಡು ಹಿಡಿಯಲು ಪ್ರಯತ್ನಿಸಿದೆ. ಕೆದಕುತ್ತಾ ಹೋದಾಗ ಕೇರಳದ ಕಲ್ಲಿಕೋಟೆಯ ಅರಬಿಕ್ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ ವಿಟ್ಲ ಹಾಗೂ ಉಪ್ಪಿನಂಗಡಿ ಮೂಲದ ನಾಲ್ಕು ವಿದ್ಯಾರ್ಥಿಗಳು ರೈಲು ಮೂಲಕ ದೆಹಲಿ ದರ್ಗಾದ ಝಿಯಾರತ್ ಯಾತ್ರೆ ಕೈಗೊಂಡದ್ದು ತಿಳಿಯಿತು. ಇವರು ರೈಲಿನಲ್ಲಿ ದೆಹಲಿಗೆ ತಲುಪುವ ಸಂದರ್ಭ ದೆಹಲಿಯಲ್ಲಿ ಕೋಮು ಸಂಘರ್ಷ ನಡೆದು ಕರ್ಫ್ಯೂ ವಿಧಿಸಲಾಗಿತ್ತು. ಈ ವಿವರ ವಿದ್ಯಾರ್ಥಿಗಳ ಗಮನಕ್ಕೆ ಬಂದಿರಲಿಲ್ಲ. ಅವತ್ತಿನ ದಿನಗಳಲ್ಲಿ ಮೊಬೈಲ್ ಬಳಕೆ ಕೂಡಾ ವಿರಳವಾಗಿತ್ತು. ವಾಟ್ಸ್ ಆಪ್ ಅನ್ನೋದು ಕನಸಿನ ಮಾತು. ಏನಿದ್ರೂ ಎಸ್ಟಿಡಿ ಬೂತ್ ಮೊರೆ ಹೋಗಬೇಕು. ಕರ್ಫ್ಯೂ ಅಂದ್ಮೇಲೆ ಬೂತ್ ಕೂಡಾ ಇಲ್ಲ. ರೈಲು ಇಳಿದು ವಾಹನವನ್ನು ತಡಕಾಡಿದರೆ ಅದು ಕೂಡಾ ಇಲ್ಲ. ವಿದ್ಯಾರ್ಥಿಗಳು ದೆಹಲಿಗೆ ಪ್ರಥಮ ಬಾರಿಗೆ ಹೋದವರು. ಗೊತ್ತು ಗುರಿಯಿಲ್ಲ. ಬಿಳಿ ಶರ್ಟು, ಬಿಳಿ ಪಂಚೆ ಹಾಗೂ ತಲೆಗೆ ಬಿಳಿ ಮುಂಡಾಸು ಧರಿಸಿದ್ದರು. ಯಾಕಂದ್ರೆ ಅವರು ಅರಬಿಕ್ ಕಲಿಯುವ ವಿದ್ಯಾರ್ಥಿಗಳು. ರೈಲ್ವೇ ಸ್ಟೇಶನ್ ನಿಂದ ನೇರವಾಗಿ ರಸ್ತೆಗಿಳಿದು ಅತ್ತಿತ್ತ ನೋಡುತ್ತಾ ನಡೆಯಲು ಪ್ರಾರಂಭಿಸಿದರು. ನೀರವ ಮೌನದ ಕರ್ಫ್ಯೂ ಪೀಡಿತ ಪ್ರದೇಶದ ರಸ್ತೆಯಲ್ಲಿ ಅನುಮಾನಸ್ಪದವಾಗಿ ನಡೆದುಕೊಂಡು ಹೋಗುತ್ತಿದ್ದ ಈ ನಾಲ್ವರು ಬಿಳಿ ವಸ್ತ್ರಧಾರಿಗಳನ್ನು ಕಂಡ ಗಸ್ತು ನಿರತ ಪೊಲೀಸರು ಪೊಲೀಸ್ ಠಾಣೆಗೆ ಕರಕೊಂಡು ಹೋದರು. ಅಲ್ಲಿ ಸಮಗ್ರ ವಿಚಾರಣೆ ನಡೆಯಿತು. ವಿದ್ಯಾರ್ಥಿಗಳು ಅಮಾಯಕರು, ದರ್ಗಾ ಝಿಯಾರತ್ ಗೆ ಬಂದವರೆಂದು ಪೊಲೀಸರಿಗೆ ದೃಢವಾಯಿತು. ಅದಾಗಾಗಲೇ ಕತ್ತಲಾವರಿಸಿದ್ದರಿಂದ ಕರ್ಫ್ಯೂ ಪ್ರದೇಶದಲ್ಲಿ ಹೊರ ಕಳುಹಿಸುವುದು ಸರಿಯಲ್ಲವೆಂದು ಅರಿತ ಪೊಲೀಸರು ವಿದ್ಯಾರ್ಥಿಗಳಿಗೆ ಠಾಣೆಯಲ್ಲೇ ಭದ್ರತೆ ನೀಡಿ ಬೆಳಿಗ್ಗೆ ಕಳುಹಿಸಿಕೊಟ್ಟರು.
ಈವೊಂದು ಘಟನೆ ಯಾವುದೋ ಮೂಲದಿಂದ ಪತ್ರಿಕೆಯ ಪ್ರತಿನಿಧಿಗೆ ರೆಕ್ಕೆಪುಕ್ಕದೊಂದಿಗೆ ಸಿಕ್ಕಿತೇನೋ ಗೊತ್ತಿಲ್ಲ. ಅದು ಪತ್ರಿಕೆಯಲ್ಲಿ ವರದಿಯಾಗುವಾಗ ಉಗ್ರರಾಗಿ ಕನ್ವರ್ಟ್ ಆಗಿತ್ತು. ಪತ್ರಿಕೆಯಲ್ಲಿ ಮೂರು ದಿನ ದಾರಾವಾಹಿಯಂತೆ ಪ್ರಕಟಿಸಲಾಯಿತು. ಹೀಗೇ ವರದಿ ಬರುತ್ತಾ ಇರುವ ಸಂದರ್ಭ ಆ ವಿದ್ಯಾರ್ಥಿಗಳು ಊರು ತಲುಪಿ ತಮ್ಮ ತಮ್ಮ ಮನೆಗಳಲ್ಲಿದ್ದರು. ನಾಲ್ಕನೇ ದಿನ ಈ ಸುಳ್ಳು ವರದಿಗೆ ಕೌಂಟರ್ ಆಗಿ ನಾನು "ದೆಹಲಿಯಲ್ಲಿ ಸಿಕ್ಕವರು ಉಗ್ರರಲ್ಲ!" ಎಂದು ನಿಜಾಂಶದ ತನಿಖಾ ಸುದ್ದಿ ಮಾಡಿದೆ. ಅದು ಕೂಡಾ ಅದೇ ಪತ್ರಿಕೆಯ ಮುಖಪುಟದ ಬಾಟಮ್ ನಲ್ಲಿ ನನ್ನ ಹೆಸರಿನ ಬೈಲೈನ್ ನೊಂದಿಗೆ ಎಂಟು ಕಾಲಂ ನ ದೊಡ್ಡ ಸುದ್ದಿಯಾಯಿತು. ಈ ವರದಿಯನ್ನು ಪತ್ರಿಕೆಗೆ ಫ್ಯಾಕ್ಸ್ ಮಾಡಿದ್ದೇ ತಡ ಸಂಪಾದಕರಿಂದ, ಹಿರಿಯ ವರದಿಗಾರರಿಂದ "ಸುದ್ದಿ ನಿಜವಲ್ವೇ?" ಎಂದು ದೃಢೀಕರಿಸುವ ನಿರಂತರ ಫೋನ್ ಕಾಲ್ ಬರಲು ಶುರುವಾಯಿತು. ಮೂರು ದಿನ ಆಧಾರರಹಿತ ವರದಿ ಬರೆದ ಪ್ರತಿನಿಧಿಯಿಂದಲೂ ಕರೆಗಳ ಮೇಲೆ ಕರೆ. ಒಟ್ಟಾರೆ ಹೈ ಪ್ರಶರ್. ವಿಟ್ಲ, ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಿಂದ ನನ್ನ ತನಿಖೆ ಶುರುವಾಯಿತು. ಮೇಲಿಂದ ಮೇಲೆ ಫೋನ್ ಕಾಲ್ ಬೇರೆ. ವಿಶೇಷ ತನಿಖಾ ದಳದಿಂದ ಬುಲಾವ್. ಆ ಸಂದರ್ಭದಲ್ಲಿ ನಾನೊಬ್ಬ ಪತ್ರಿಕಾ ವರದಿಗಾರನಾಗಿ ಎಲ್ಲರಿಗೂ ನಿಜಾಂಶದ ಮನವರಿಕೆ ಮಾಡಿಕೊಡಲು ಸಫಲನಾದೆ. ನಾಲ್ಕನೇ ದಿನದ ನನ್ನ ಸ್ಪಷ್ಟೀಕರಣದ ವರದಿಯೊಂದಿಗೆ ಆ ಇಶ್ಯೂಗೆ ಪುಲಿಸ್ಟಾಪ್ ಬಿತ್ತಾದರೂ ನನ್ನನ್ನು ಕೆಣಕುವವರ ಸಂಖ್ಯೆ ಬಲು ಜೋರಿತ್ತು. ಅಂತೂ ದೆಹಲಿಯಲ್ಲಿ ಸಿಕ್ಕವರು ಅಮಾಯಕರು, ಉಗ್ರರಲ್ಲ ಎಂದು ಸಾಬೀತುಪಡಿಸಲು ಸಾಕುಸಾಕಾಗಿತ್ತು.







