ಸೇಲಂ ಖಾಸಗಿ ಕಾಲೇಜ್‌ನಲ್ಲಿ ಕಿರುಕುಳ: ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ!

ಕೋಯಮತ್ತೂರ್,ಜುಲೈ 16: ಸೇಲಂ ಉಡಯಂ ಪಟ್ಟಿಯ ಖಾಸಗಿ ಕಾಲೇಜೊಂದರ ಹಾಸ್ಟೆಲ್‌ನಲ್ಲಿ ಕಿರುಕುಳಕ್ಕೊಳಗಾದ ಬಿಕಾಂ ವಿದ್ಯಾರ್ಥಿ ಗುರುವಾರ ಮದ್ಯಾಹ್ನ ಕಾಲೇಜಿನ ಎರಡನೆ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಕೆಲವು ದಿವಸಗಳಿಂದ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಗೋಕುಲ್ ರಾಜ್‌ಗೆ ಹಿರಿಯ ವಿದ್ಯಾರ್ಥಿಗಳು ಕಿರುಕುಳ ಮಾಡುತ್ತಿದ್ದರೆನ್ನಲಾಗಿದ್ದು ಇದರಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾದನೆಂದು ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ರ್ಯಾಗಿಂಗ್ ನೀಡಿದರೆನ್ನಲಾದ ಬಿಕಾಂ ಕೊನೆ ವರ್ಷದ ವಿದ್ಯಾರ್ಥಿಗಳಾದ ವೀಯುಪ್ಪುರಂ ಶಂಕರಪುರಂ ಅಲೆಗ್ಸಾಂಡರ್, ಧರ್ಮಪುರಿ ಕೋಣಂಪಟ್ಟಿ ಮೂರ್ತಿ, ಆರೂರ್ ಪಳ್ಳಿಪಟ್ಟಿ ಬಾಲರಾಜಿ, ಅರಿಯಲ್ಲೂರ್ ಪೆರಿಯಕೃಷ್ಣಪುರಂ ಅಜಿತ್ ಹಾಗೂ ವಾರ್ಡನ್ ಕೃಷ್ಣಮೂರ್ತಿ(43ವರ್ಷ) ಇವರನ್ನು ಪೊಲೀಸರು ಬಂಧಿಸಿದ್ದು ಕಿರುಕುಳ ತಡೆಯುವಲ್ಲಿ ನಿರ್ಲಕ್ಷ್ಯವಹಿಸಿದ್ದಕ್ಕಾಗಿ ವಾರ್ಡನ್ ಕೃಷ್ಣಮೂರ್ತಿಯನ್ನು ಆರೋಪಿಯಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಕಿರುಕುಳಕ್ಕೊಳಗಾದ ಗೋಕುಲ್ ರಾಜ್‌ನನ್ನು ಹಿರಿಯ ವಿದ್ಯಾರ್ಥಿಗಳು ಅರೆನಗ್ನನಾಗಿಸಿ ನೃತ್ಯಮಾಡಿಸುತ್ತಿದ್ದರು ಎಂದು ವರದಿ ತಿಳಿಸಿದೆ.





