ಮಹಾದಾಯಿ ಯೋಜನೆ ಬಗ್ಗೆ ಪ್ರಧಾನಿ ನಿರ್ಲಕ್ಷ: ಮಲ್ಲಿಕಾರ್ಜುನ ಖರ್ಗೆ
.jpg)
ಮಂಗಳೂರು,ಜು.16: ಮಹಾದಾಯಿ ಯೋಜನೆ ಕುರಿತಂತೆ ಕರ್ನಾಟಕಕ್ಕೆ ನ್ಯಾಯ ಒದಗಿಸುವಂತೆ ಕೋರಿ ಕಳೆದ ಒಂದು ವರ್ಷದಿಂದ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರಕಾರ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಕಂಕನಾಡಿ ಕರಾವಳಿ ವೃತ್ತ ರಸ್ತೆಗೆ ದಿ. ಬ್ಲೇಸಿಯಸ್ ಎಂ.ಡಿಸೋಜಾ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಕೃಷಿ ಬಗ್ಗೆ ಅಲ್ಲದಿದ್ದರೂ ಕನಿಷ್ಠ ಕುಡಿಯುವ ನೀರಿಗಾದರೂ ಅವಕಾಶ ಒದಗಿಸಬಹುದಿತ್ತು. ಆದರೆ ಹೋರಾಟಕ್ಕೂ ಕನಿಷ್ಠ ಸ್ಪಂದನೆ ಮಾಡದಿರುವುದು ಬೇಸರದ ಸಂಗತಿ. ಮುಂದಿನ ಸಂಸತ್ತಿನಲ್ಲೂ ಇದನ್ನು ಪ್ರಸ್ತಾಪಿಸಲಾಗುವುದು. ಈ ವಿಷಯದಲ್ಲಿ ರಾಜ್ಯದಲ್ಲಿರುವ ಕೇಂದ್ರದ ಸಚಿವರು ಕೂಡಾ ದನಿಗೂಡಿಸಬೇಕು. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕೃಷ್ಣಾ ನದಿ ಯೋಜನೆ ವಿವಾದವನ್ನು ಸಮರ್ಪಕವಾಗಿ ಬಗೆಹರಿಸಲಾಗಿತ್ತು ಎಂದವರು ಹೇಳಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ, ಸದನದಲ್ಲಿ ಈಗಾಗಲೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಹೊರಗಡೆ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿಯವರ ಮಾತಿಗೆ ತಾವು ಬದ್ಧ ಎಂದು ಹೇಳಿದ ಅವರು, ಜನಾರ್ದನ ಪೂಜಾರಿಯವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.





