ಟರ್ಕಿ ಕ್ಷಿಪ್ರ ಕ್ರಾಂತಿ ಯತ್ನ : ಪ್ರಶ್ನೆಗಳು ಮತ್ತು ಉತ್ತರಗಳು

ನವದೆಹಲಿ, ಜು.16 : ಟರ್ಕಿ ದೇಶದ ಸೇನೆಯ ಒಂದು ವಿಭಾಗ ಶುಕ್ರವಾರದಂದು ಕ್ಷಿಪ್ರ ಕ್ರಾಂತಿಯ ಮೂಲಕ 2003 ರಿಂದ ಅಧಿಕಾರದಲ್ಲಿರುವ ಅಧ್ಯಕ್ಷ ಟಯ್ಯಿಪ್ ಎರ್ಡೋಗನ್ ಅವರನ್ನು ಕಿತ್ತೊಗೆಯಲು ಯತ್ನಿಸಿದೆ. ಈ ಸೇನಾ ದಂಗೆ ಯಶಸ್ವಿಯಾಗಿದ್ದೇ ಆದಲ್ಲಿ ಈಗಾಗಲೇ ಆಡಳಿತ ವೈಫಲ್ಯ, ಆಂತರಿಕ ಕಲಹ ಹಾಗೂ ಇಸ್ಲಾಮಿಕ್ ಸ್ಟೇಟ್ ಬೆದರಿಕೆಯಿಂದ ಕಂಗೆಟ್ಟಿರುವ ಪಶ್ಚಿಮ ಏಷ್ಯಾದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಂಭವವಿದೆ
ಟರ್ಕಿಯಲ್ಲಿ ನಡೆದ ಈ ಕ್ಷಿಪ್ರ ಕ್ರಾಂತಿಯ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಈ ಕ್ಷಿಪ್ರ ಕ್ರಾಂತಿಯ ಹಿಂದಿರುವವರು ಯಾರು ?
ಟರ್ಕಿಯ ಸಂಪೂರ್ಣ ಸೇನಾ ಪಡೆ ಈ ದಂಗೆಯ ಹಿಂದೆ ಇರುವಂತೆ ಕಾಣುತ್ತಿಲ್ಲ. ಈ ಕ್ಷಿಪ್ರ ಕ್ರಾಂತಿ ಯತ್ನ ಕೆಲವೇ ಕೆಲವು ಗಂಟೆಗಳ ತರುವಾಯ ಎಡವುತ್ತಿರುವುದನ್ನು ಗಮನಿಸಿದರೆ, ಸೇನೆಯ ಇನ್ನೂ ಹಲವು ವಿಭಾಗಗಳು ಎರ್ಡೋಗನ್ ಅವರಿಗೆ ಬೆನ್ನು ತಿರುಗಿಸಲು ಇನ್ನೂ ಮನಸ್ಸು ಮಾಡಿಲ್ಲವೆಂಬುದು ಸ್ಪಷ್ಟ.
ಈ ಕ್ಷಿಪ್ರ ಕ್ರಾಂತಿ ಏತಕ್ಕಾಗಿ ?
ಎರ್ಡೋಗನ್ ಅವರು ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿದ್ದಾರಲ್ಲದೆ ಟರ್ಕಿಯಲ್ಲಿ ಸಾಕಷ್ಟು ಸುಧಾರಣೆಗಳನ್ನೂ ತಂದಿದ್ದಾರೆ. ಆದರೆ ಅಲ್ಲಿನ ಸೇನಾ ಪಡೆಯು ದೇಶದ ಪಿತಾಮಹನೆಂದು ಕರೆಯಲ್ಪಡುವ ಮುಸ್ತಾಫ ಕೇಮಲ್ ಅಟಟುರ್ಕ್ ಅವರ ಕೇಮಾಲಿಸಮ್ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತಿದೆ. ಅತ್ತ ಎರ್ಡೋಗನ್ ಅವರನ್ನು ಇಸ್ಲಾಮಿಸ್ಟ್ ಹಾಗೂ ಸಂಪ್ರದಾಯವಾದಿಯೆಂದು ಬಣ್ಣಿಸಲಾಗುತ್ತದೆ.
ಈ ಕ್ಷಿಪ್ರ ಕ್ರಾಂತಿ ಯಶಸ್ವಿಯಾಗುವುದೇ ?
ಈ ಕ್ಷಣದಲ್ಲಿ ಈ ಕ್ಷಿಪ್ರ ಕ್ರಾಂತಿ ತನ್ನ ವೇಗವನ್ನು ಕಳೆದುಕೊಂಡಿದೆಯೆಂಬಂತೆ ಕಾಣುತ್ತಿದೆ. ಎರ್ಡೋಗನ್ ಕೂಡ ಸಾರ್ವಜನಿಕರ ಹಾಗೂ ಸೇನಾ ಪಡೆಗಳ ಒಂದು ವಿಭಾಗದ ಬೆಂಬಲ ಹೊಂದಿದ್ದಾರೆ. ಮೇಲಾಗಿ ಸಾವಿರಾರು ಜನರು ಪ್ರಜಾಪ್ರಭುತ್ವವಾದಿ ಎರ್ಡೋಗನ್ ಸರಕಾರದ ಪರವಾಗಿ ಬೀದಿಗಿಳಿದಿದ್ದಾರೆ.







