ವೇತನ ಹೆಚ್ಚಿಸಿದ ಬಾಸ್ ಗೆ ವಿಲಾಸಿ ಕಾರು ಗಿಫ್ಟ್ ಕೊಟ್ಟ ಉದ್ಯೋಗಿಗಳು !

ನ್ಯೂಯಾರ್ಕ್, ಜು.16: ನಿಮ್ಮ ಬಾಸ್ ನಿಮ್ಮ ಸಂಬಳ ಹೆಚ್ಚಿಸಿದರೆ ನೀವೇನು ಮಾಡುತ್ತೀರಿ ? ಒಂದೋ ನೀವು ಸಂತಸ ಪಡುತ್ತೀರಿ ಅಥವಾ ನಿಮ್ಮ ನಿರೀಕ್ಷೆಯಷ್ಟು ವೇತನ ಹೆಚ್ಚಿಸಿಲ್ಲವೆಂದು ನೀವು ಗೊಣಗಬಹುದು.
ಆದರೆ ಗ್ರೇವಿಟಿ ಪೇಮೆಂಟ್ಸ್ ಸಂಸ್ಥೆಯ 120 ಸಿಬ್ಬಂದಿಗಳು ತಮ್ಮ ವೇತಳ ಹೆಚ್ಚು ಮಾಡಿದ್ದಕ್ಕೆ ಪ್ರತಿಯಾಗಿ ಏನು ಮಾಡಿದರು ಗೊತ್ತೇ ? ಅವರೇನು ತಮ್ಮ ಬಾಸ್ ಡ್ಯಾನ್ ಪ್ರೈಸ್ ಗೆ ಧನ್ಯವಾದ ಹೇಳುವ ಪತ್ರ ಬರೆಯಲಿಲ್ಲ, ಬದಲಾಗಿ ಅವರ ಕನಸಿನ ಹೊಚ್ಚ ಹೊಸ ಐಷಾರಾಮಿ ಟೆಸ್ಲಾ ಕಾರು ಉಡುಗೊರೆಯಾಗಿ ನೀಡಿದ್ದಾರೆ.
ಈ ವಿಚಾರವನ್ನು ಪ್ರೈಸ್ ಅವರೇ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಅಂದ ಹಾಗೆ ಈ ಬೆಲೆಬಾಳುವ ಕಾರು ಖರೀದಿಸಲು ಹಣವೆಲ್ಲಿಂದ ಬಂತು ಎಂದು ಯೋಚಿಸುತ್ತೀರಾ ? ಎಲ್ಲಾ ಉದ್ಯೋಗಿಗಳು ತಮ್ಮ ಒಂದು ತಿಂಗಳ ವೇತನವನ್ನು ಉಳಿಸಿ ಅದರಿಂದ 70,000 ಡಾಲರ್ ಬೆಲೆಬಾಳುವ ಈ ಕಾರು ಖರೀದಿಸಿದ್ದಾರೆ.
ಪ್ರೈಸ್ ಅವರು ತಮ್ಮ ಎಲ್ಲಾ 120 ಉದ್ಯೋಗಿಗಳ ವಾರ್ಷಿಕ ಕನಿಷ್ಠ ವೇತನವನ್ನು 70,000 ಡಾಲರ್ ಮಾಡಿದ್ದರು. ಇದರಿಂದಾಗಿ ಕೆಲವು ಉದ್ಯೋಗಿಗಳ ವೇತನ ದ್ವಿಗುಣವಾಗಿದೆ. ಉದ್ಯೋಗಿಗಳ ವೇತನ ಹೆಚ್ಚಿಸಲು ಪ್ರೈಸ್ ತಾವು ಪಡೆಯುವ ಸಂಭಾವನೆಯನ್ನು 1.1 ಮಿಲಿಯನ್ ಡಾಲರ್ ನಿಂದ 70,000 ಡಾಲರ್ ಗೆ ಇಳಿಸಿದ್ದಾರೆ.







