ಓವೈಸಿ ವಿರುದ್ಧ ದೇಶದ್ರೋಹ ಆರೋಪದಲ್ಲಿ ಎಫ್ಐಆರ್ ದಾಖಲು

ಹೈದರಾಬಾದ್, ಜು.16: ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾದ ಸ್ಥಳೀಯ ಐವರಿಗೆ ಕಾನೂನು ನೆರವು ಒದಗಿಸುವುದಾಗಿ ಹೇಳಿಕೆ ನೀಡಿದ್ದ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್‌ನ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ತೆಲಂಗಾಣದ ರಂಗಾರೆಡ್ಡಿ ಜಿಲ್ಲಾ ಕೋರ್ಟ್ ಆದೇಶದ ಮೇರೆಗೆ ಸರೂರ್ ನಗರ ಠಾಣೆ ಪೊಲೀಸರು ದೇಶ ದ್ರೋಹ (ಐಪಿಸಿ 124 ಎ ) ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ವಕೀಲರಾದ ಕೆ.ಕರುಣ್ ಸಾಗರ್ ಅವರು ಓವೈಸಿ ವಿರುದ್ಧ ದೇಶದ್ರೋಹದ ಆರೋಪದಲ್ಲಿ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಪೊಲೀಸರಿಗೆ ಆದೇಶ ನೀಡಿದೆ.
ಇತ್ತೀಚೆಗೆ ಐಸಿಸ್ ನಂಟು ಹೊಂದಿರುವ ಆರೋಪದಲ್ಲಿ ಎನ್‌ಐಎ ಬಂಧಿಸಿರುವ ಐವರಿಗೆ ಕಾನೂನು ನೆರವು ನೀಡುವುದಾಗಿ ಓವೈಸಿ ಹೇಳಿಕೆ ನೀಡಿದ್ದರು.
Next Story





