ಶಿಕ್ಷಣದಲ್ಲಿ ಸೋಲುವುದನ್ನು ಮತ್ತು ರಾಜಿ ಮಾಡಿಕೊಳ್ಳುವುದನ್ನು ಕಲಿಸುವಂತಿರಬೇಕು: ಡಾ. ನರೇಂದ್ರ ರೈ ದೇರ್ಲ

ಪುತ್ತೂರು, ಜು.16: ಪ್ರಾಚೀನ ಕಾಲದಲ್ಲಿ ಶಿಕ್ಷಣವು ಗುರು ಕೇಂದ್ರಿತವಾಗಿತ್ತು. ಕಾಲಕ್ರಮೇಣ ಅದು ಶಿಷ್ಯ ಕೇಂದ್ರಿತವಾಯಿತು. ಪ್ರಚಲಿತ ಸನ್ನಿವೇಶದಲ್ಲಿ ಶಿಕ್ಷಣವು ಪೋಷಕ ಕೇಂದ್ರಿತವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸೋಲುವುದನ್ನು ಮತ್ತು ರಾಜಿ ಮಾಡಿಕೊಳ್ಳುವುದನ್ನು ಕಲಿಸುವಂತಾಗಬೇಕು ಎಂದು ಬೆಳ್ಳಾರೆಯ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಚಿಂತಕ ಡಾ.ನರೇಂದ್ರ ರೈ ದೇರ್ಲ ಹೇಳಿದ್ದಾರೆ.
ಅವರು ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಸಭಾಭವನದಲ್ಲಿ ರಕ್ಷಕ ಶಿಕ್ಷಕ ಸಂಘವನ್ನು ಉದ್ಘಾಟಿಸಿ ‘ವಿದ್ಯಾರ್ಥಿಗಳ ಪೋಷಕರಿಗಾಗಿ ಪೋಷಕತ್ವ’ ಎಂಬ ವಿಷಯದ ಕುರಿತು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುತ್ತಾ, ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿ ಮಾಡುವಲ್ಲಿ ಶಿಕ್ಷಕರೊಂದಿಗೆ ಪೋಷಕರೂ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಿಕ್ಷಣದಲ್ಲಿ ವಿಜ್ಞಾನದ ಜೊತೆಗೆ ಸಾಂಸ್ಕೃತಿಕ ವೌಲ್ಯಗಳನ್ನೂ ಕಲಿಸುವಂತಾಗಬೇಕು. ಅಂಕಗಳ ಆಧಾರದಲ್ಲಿ ಶಿಕ್ಷಣದ ವೌಲ್ಯ ನಿರ್ಧರಿಸುವ ಕಾಲಘಟ್ಟದಲ್ಲಿರುವ ನಾವು ಜೇವನ ವೌಲ್ಯಗಳನ್ನು ಕಡೆಗಣಿಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಚಾರ್ಯ ವಂ.ವಿಜಯ್ ಲೋಬೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಚಾಲಕ ರೆ.ಫಾ.ಆಲ್ಫ್ರೆಡ್ ಜೆ. ಪಿಂಟೊ ಅಧ್ಯಕ್ಷತೆ ವಹಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ. ಸೂರ್ಯನಾರಾಯಣ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಕ್ಷಕ-ಶಿಕ್ಷಕ ಸಂಘದ ವತಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳು ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ನಡೆದ ಸಂಘದ ಮಹಾಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ಭಟ್ ಪಿ. ಸ್ವಾಗತಿಸಿದರು. ಖಜಾಂಚಿ ಅನಿಲ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಉಷಾ ಯಶವಂತ್ ಎ ಕಾರ್ಯಕ್ರಮ ನಿರೂಪಿಸಿದರು.







