ಪತ್ರಕರ್ತರಿಗೂ ರಾಜೀವ್ ‘ಆರೋಗ್ಯ ಭಾಗ್ಯ’
ಬೆಂಗಳೂರು, ಜು. 16: ರಾಜ್ಯದಲ್ಲಿನ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಕಾರ್ಯನಿರತ ಪತ್ರಕರ್ತರಿಗೂ ‘ರಾಜೀವ್ ಆರೋಗ್ಯ ಭಾಗ್ಯ’ ಯೋಜನೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರಿಗೆ ನೀಡುವಂತೆ ಗಂಭೀರ ಮತ್ತು ಅಪಘಾತಕಾರಿಯಾದ 7 ನಿರ್ದಿಷ್ಟ ಕಾಯಿಲೆಗಳಿಗೆ ಅತ್ಯುತ್ತಮ ದರ್ಜೆಯ ಸ್ಟೆಷಾಲಿಟಿ ಆಸ್ಪತ್ರೆಗಳಲ್ಲಿ ಸಹ ಪಾವತಿಯೊಂದಿಗೆ (ಶೇ.70ರಷ್ಟು ಸರಕಾರ ಮತ್ತು ಶೇ.30ರಷ್ಟು ಫಲಾನುಭವಿ) ಉಚಿತವಾಗಿ ಶಸ್ತ್ರಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾನ್ಯತೆ ಪಡೆದ 1350 ಪತ್ರಕರ್ತರಿಗೆ ಅವರ ಕುಟುಂಬದವರಾದ ಪತಿ-ಪತ್ನಿ ಮತ್ತು ಅವಲಂಬಿತ ಇಬ್ಬರು ಮಕ್ಕಳನ್ನೊಳಗೊಂಡಂತೆ ‘ರಾಜೀವ್ ಆರೋಗ್ಯ ಭಾಗ್ಯ’ ಯೋಜನೆಯನ್ನು ಅಳವಡಿಸಲು ಚಿಕಿತ್ಸೆ ತಗಲುವ ಶೇ.30ರಷ್ಟು ಅನುದಾನವನ್ನು ವಾರ್ತಾ ಇಲಾಖೆಯೇ ಭರಿಸುತ್ತದೆ. ಈ ಯೋಜನೆಗೆ ಪತ್ರಕರ್ತರನ್ನು ಒಳಪಡಿಸಲು ಆರೋಗ್ಯ ಇಲಾಖೆ ಆದೇಶವನ್ನು ಹೊರಡಿಸುವಂತೆ ಕೋರಲಾಗಿದೆ.
ಮಾರ್ಗಸೂಚಿ: ವಾರ್ತಾ ಇಲಾಖೆ ಮಾನ್ಯತೆ ಹೊಂದಿರುವ ಹಾಗೂ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ರಾಜೀವ ಆರೋಗ್ಯ ಭಾಗ್ಯ ಯೋಜನೆಗೆ ಅರ್ಹರು.
ಯೋಜನೆ ವ್ಯಾಪ್ತಿಗೆ ಒಳಪಡ ಬಯಸುವವರು ತಾವು ಕಾರ್ಯ ನಿರ್ವಹಿಸುವ ಮಾಧ್ಯಮ ಸಂಸ್ಥೆಯಿಂದ ನೇಮಕಾತಿ ಪ್ರಮಾಣ ಪತ್ರ ಹಾಗೂ ವೇತನ ಪ್ರಮಾಣ ಪತ್ರವನ್ನು ಸಂಸ್ಥೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ಸಲ್ಲಿಸಬೇಕು. ಅರ್ಹ ಫಲಾನುಭವಿಗಳು ಎಪಿಎಲ್ ಕಾರ್ಡ್ ಅತ್ಯಾವಶ್ಯಕ. ಸಂಪಾದಕೀಯ, ವರದಿಗಾರಿಕೆ, ಸುದ್ದಿ ಛಾಯಾಗ್ರಾಹಕರು ಮಾತ್ರ ಈ ಯೋಜನೆಗೆ ಅರ್ಹರು.
ಅಂಗೀಕೃತ ಸುದ್ದಿವಾಹಿನಿಗಳ ಸಂಪಾದಕೀಯ, ವರದಿಗಾರಿಕೆ, ಕ್ಯಾಮರಾಮನ್, ಸುದ್ದಿ ವಾಚಕರು, ಸುದ್ದಿ ನಿರ್ಮಾಪಕರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಮಾಧ್ಯಮಗಳ ಜಾಹೀರಾತು, ಪ್ರಸರಣಾ, ಆಡಳಿತ, ಲೆಕ್ಕಪತ್ರ, ಮುದ್ರಣ ಸೇರಿ ಇತರೆ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನ್ವಯಿಸುವುದಿಲ್ಲ.
ನಗದು ರಹಿತ ಆರೋಗ್ಯ ಸೇವೆ ನೋಂದಾಯಿತ ಆಸ್ಪತ್ರೆಗಳಿಗೆ ಮಾತ್ರ ಸೀಮಿತ. ಈ ಯೋಜನೆ ಕೆಲ ಷರತ್ತುಗಳೊಂದಿಗೆ ಕುಟುಂಬ ವರ್ಗಕ್ಕೂ ವಿಸ್ತರಿಸಲಾಗುವುದು. ಒಂದು ವೇಳೆ ಪತ್ರಕರ್ತ ವಿವಾಹವಾಗದೆ ಇದ್ದಲ್ಲಿ ಅವಲಂಬಿತ ತಂದೆ-ತಾಯಿಗೂ ಈ ಸೌಲಭ್ಯದ ಲಾಭವನ್ನು ವಿಸ್ತರಿಸಲು ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.