ಹೆದ್ದಾರಿ ಅಗಲೀಕರಣ: ಮಂಗಳೂರು ನಗರ ವ್ಯಾಪ್ತಿಯಲ್ಲಿ 30 ಮೀಟರ್‌ಗೆ ಸೀಮಿತಕ್ಕೆ ಸೂಚನೆ

ಮಂಗಳೂರು, ಜು. 16: ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 (3) ಅಗಲೀಕರಣವನ್ನು ಮಂಗಳೂರು ನಗರ ವ್ಯಾಪ್ತಿ ಮತ್ತು ಕೈಕಂಬದಿಂದ ಬಡಗ ಎಡಪದವು, ತೆಂಕ ಎಡಪದವು ಗ್ರಾಮಗಳಲ್ಲಿ 45 ಮೀ. ಬದಲಾಗಿ 30 ಮೀಟರ್‌ಗೆ ಸೀಮಿತಗೊಳಿಸಲು ಶುಕ್ರವಾರ ನಡೆದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಸಾರ್ವಜನಿಕರ ಕೋರಿಕೆಯ ಮೇರೆಗೆ ಕೆಲವೊಂದು ಪ್ರದೇಶಗಳಲ್ಲಿ 30 ಮೀಟರ್‌ಗೆ ಸೀಮಿತಗೊಳಿಸಿ ರಸ್ತೆ ಅಗಲೀಕರಣಗೊಳಿಸುವ ಮೂಲಕ ಸಹಕರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೂಸ್ವಾಧೀನಾಧಿಕಾರಿ ಗಾಯತ್ರಿ ನಾಯಕ್ ಮಾತನಾಡಿ, ಮಂಗಳೂರು-ಕಾರ್ಕಳವರೆಗಿನ 47 ಕಿ.ಮೀ. (ಚತುಷ್ಪಥ) ರಸ್ತೆಯನ್ನು ಅಗಲೀಕರಣಗೊಳಿಸುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮಂಗಳೂರಿನಿಂದ ಮೂಡಬಿದಿರೆವರೆಗಿನ ರಸ್ತೆ 45 ಮೀಟರ್ ಅಗಲೀಕರಣಗೊಳ್ಳಲಿದೆ. ಸಾಣೂರಿನಿಂದ ಪಡುಮಾರ್ನಾಡುವರೆಗೆ 30 ಮೀ. ಅಗಲೀಕರಣ ನಡೆಯಲಿದೆ ಎಂದರು. ರಸ್ತೆ ಅಗಲೀಕರಣ ಸಲುವಾಗಿ 307.28 ಎಕರೆ ಖಾಸಗಿ ಜಮೀನು ಹಾಗೂ 140.52 ಎಕರೆ ಸರಕಾರಿ ಜಮೀನು ಸೇರಿ ಒಟ್ಟು 448.80 ಎಕರೆ ಜಮೀನು ಭೂಸ್ವಾಧೀನಕ್ಕೆ ಒಳಪಡಲಿದೆ ಎಂದು ಅವರು ತಿಳಿಸಿದರು.
ಗುರುಪುರದಲ್ಲಿ ಬೈಪಾಸ್ ನಿರ್ಮಾಣದ ಸಲುವಾಗಿ 3.3 ಕಿಮೀ ಮತ್ತು 4.2 ಕಿ.ಮೀಟರ್‌ನ ಎರಡು ಪ್ರಸ್ತಾವನೆಗಳಿವೆ. ಈ ಸಂಬಂಧ ಸೂಕ್ತವಾದುದನ್ನು ಆಯ್ಕೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸಚಿವ ರೈ ಅಧಿಕಾರಿಗಳಿಗೆ ತಿಳಿಸಿದರು. ಮೂಡಬಿದಿರೆಯಲ್ಲಿ 3.8 ಕಿಮೀ, 5.8 ಕಿಮೀ ಮತ್ತು 6.6 ಕಿಮೀಯ 3 ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಪ್ರಶಾಂತ್ ತಿಳಿಸಿದರು.
ಇದಕ್ಕೆ ಅಸಮಾಧಾನಗೊಂಡ ಮಾಜಿ ಸಚಿವ, ಶಾಸಕ ಕೆ. ಅಭಯಚಂದ್ರ ಜೈನ್, ಮೂಡಬಿದಿರೆಯಲ್ಲಿ ಈಗಾಗಲೇ ಒಂದು ಬೈಪಾಸ್ ರಸ್ತೆ ಇದ್ದರೂ, ಮೂರು ಪ್ರಸ್ತಾವನೆಯನ್ನು ಯಾಕೆ ಸಿದ್ಧಪಡಿಸಲಾಗಿದೆ ಎಂದು ಪ್ರಶ್ನಿಸಿದರು. ಮಾತ್ರವಲ್ಲದೆ ಬೈಪಾಸ್ ರಸ್ತೆ ಕಲ್ಪಿಸುವ ಸಂಬಂಧ ರಾಜಕೀಯ ಮಾಡಬೇಡಿ. ಇರುವ ರಸ್ತೆಯನ್ನೇ ಸರಿಯಾದ ರೀತಿಯಲ್ಲಿ ನಿರ್ವಹಿಸಿ ಎಂದು ಹೇಳಿದರು.
ಶಾಸಕ ಬಿ. ಎ. ಮೊದಿನ್ ಬಾವ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು.







