ಪ್ರತಿಭಟನೆಯ ಹೆಸರಲ್ಲಿ ವಿಪಕ್ಷಗಳಿಂದ ಕಾಲಹರಣ: ಐವನ್ ಡಿಸೋಜ

ಮಂಗಳೂರು,ಜು.16: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನಡೆದ ತತ್‌ಕ್ಷಣವೆ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವುದರಿಂದ, ಈ ಬಗ್ಗೆ ನೀಡಿರುವ ದೂರನ್ನು ಸಿಐಡಿ ತನಿಖೆಗೆ ನೀಡಲಾಗಿರುವುದರಿಂದ ಎಫ್‌ಐಆರ್ ದಾಖಲಿಸಲು ಆಗುವುದಿಲ್ಲಎಂದು ವಿಧಾನಪರಿಷತ್ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪೊಲೀಸ್ ಇಲಾಖೆ ಗಣಪತಿ ಕುಟುಂಬಕ್ಕೆ ಮಾಹಿತಿ ನೀಡಿದೆ ಎಂದರು.
ಸಚಿವ ಕೆ.ಜೆ.ಜಾರ್ಜ್ ಅವರು ಆರೋಪಿ ಎಂದು ದಾಖಲೆ ಸಮೇತ ತೋರಿಸಲು ವಿಪಕ್ಷಗಳು ವಿಫಲರಾಗಿದ್ದಾರೆ. ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಪಕ್ಷಗಳು ಪ್ರತಿಭಟನೆಯ ಹೆಸರಿನಲ್ಲಿ ಕಾಲಹರಣ ಮಾಡಿದ್ದಾರೆ ಎಂದು ಹೇಳಿದರು.
ಎಂ.ಕೆ ಗಣಪತಿ ಅವರ ಆತ್ಮಹತ್ಯೆ ನಂತರ ಬಿಜೆಪಿಗೆ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆಯುವುದು ಏಕೈಕ ಅಜೆಂಡವಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ 13 ಪ್ರಕರಣಗಳನ್ನು ಸಿಬಿಐಗೆ ನೀಡಬೇಕೆಂದು ಒತ್ತಾಯಿಸಿದ್ದರೂ ಒಂದೇ ಒಂದು ಪ್ರಕರಣವನ್ನು ಬಿಜೆಪಿ ಸಿಬಿಐಗೆ ಕೊಟ್ಟಿಲ್ಲ ಎಂದು ಹೇಳಿದರು.





