ವಿಂಡೀಸ್‌ನಲ್ಲಿ ಸಂಕಷ್ಟದಲ್ಲಿ ಸಿಲುಕಿದ ರಾಹುಲ್, ಬಿನ್ನಿ, ಯಾದವ್

ಸೈಂಟ್ ಕಿಟ್ಸ್, ಜು.16: ವೆಸ್ಟ್‌ಇಂಡೀಸ್ ಟೆಸ್ಟ್ ಕ್ರಿಕೆಟ್ ಸರಣಿಗೆ ಪಾಲ್ಗೊಂಡಿರುವ ಭಾರತದ ಕ್ರಿಕೆಟ್ ತಂಡದ ಕೆಲವು ಆಟಗಾರರು ವಿರಾಮದ ವೇಳೆ ಬೀಚ್ ಒಂದರಲ್ಲಿ ಬಿಯರ್‌ನ ಸಹವಾಸಕ್ಕೆ ಹೋಗಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ವಿಂಡೀಸ್‌ನ ನೆವೀಸ್ ಬೀಚ್‌ನಲ್ಲಿ ಯುವ ಆಟಗಾರ ಕೆ.ಎಲ್.ರಾಹುಲ್, ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಮತ್ತು ಬೌಲರ್ ಉಮೇಶ್ ಯಾದವ್ ಅವರು ಬಿಯರ್ ಬಾಟ್ಲಿ ಹಿಡಿದುಕೊಂಡು ತಂಡದ ಸಹಾಯಕ ಸಿಬಂದಿಯೊಂದಿಗೆ ಪೋಸ್ ನೀಡಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ವೆಸ್ಟ್‌ಇಂಡಿಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ಮತ್ತು ಭಾರತ ತಂಡಗಳ ನಡುವೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಇದೇ ವೇಳೆ ಆಟಗಾರರು ಬಿಯರ್ ಬಾಟ್ಲಿಯೊಂದಿಗೆ ಪೋಟೊಕ್ಕೆ ಪೋಸ್ ನೀಡಿದ್ದಾರೆ. ಇದು ಬಿಸಿಸಿಐ ಅಧಿಕಾರಿಗಳ ಕೋಪಕ್ಕೆ ಕಾರಣವಾಗಿದೆ.
ಆಟಗಾರರ ಅನುಚಿತ ವರ್ತನೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಆಟಗಾರರು ದೇಶದ ಯುವಕರಿಗೆ ಆದರ್ಶ ವ್ಯಕ್ತಿಗಳಾಗಿದ್ದಾರೆ. ಆದ ಕಾರಣ ಅವರು ಈ ರೀತಿ ವರ್ತಿಸಿದರೆ ಯುವಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.
ಫೋಟೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಟಗಾರರು ಸಾಮಾಜಿಕ ಜಾಲ ತಾಣದಿಂದ ಫೋಟೊವನ್ನು ಡಿಲೀಟ್ ಮಾಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.







