ಸಾಗರ: ದಸಂಸದಿಂದ ತಹಶೀಲ್ದಾರ್‌ಗೆ ಮನವಿ

ಸಾಗರ, ಜು.16: ತಾಲೂಕಿನ ತಾಳಗುಪ್ಪಹೋಬಳಿಯ ಕಾನ್ಲೆ ಗ್ರಾಮದ ಜಾಗವನ್ನು ದಲಿತ ಕುಟುಂಬ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಅದನ್ನು ಮಂಡಗಳಲೆ ಗ್ರಾಮದ ಮೇಲ್ವರ್ಗದ ಗ್ರಾಮಾಭಿವೃದ್ಧಿ ಸಮಿತಿಯವರು ಬಲವಂತವಾಗಿ ತೆರವುಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮಂಡಗಳಲೆ ಗ್ರಾಮದ ಈಶ್ವರ ಬಿನ್ ಬಸಪ್ಪ ದಲಿತ ಕುಟುಂಬ ಲಾಗಾಯ್ತಿನಿಂದ ಈ ಭೂಮಿಯನ್ನು ನಂಬಿಕೊಂಡು ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದಾರೆ. ಜಮೀನು ಮಂಜೂರಾತಿಗೆ ಬಗರ್‌ಹುಕುಂ ಕಾಯ್ದೆಯಡಿ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಜಮೀನಿಗೆ ಸಂಬಂಧಪಟ್ಟಂತೆ ಮೇ 27-2004ರಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಜಮೀನಿಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಲು ಸೂಚನೆ ಸಹ ಬಂದಿರುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಮಂಡಗಳಲೆ ಗ್ರಾಮದ ಮೇಲ್ವರ್ಗದ ಗ್ರಾಮಾಭಿವೃದ್ಧಿ ಸಮಿತಿ ಕಾನೂನುಬಾಹಿರವಾಗಿ ಕುಟುಂಬಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಜಮೀನಿನ ಸುತ್ತಲೂ ಹಾಕಿದ್ದ ತಂತಿಬೇಲಿಯನ್ನು ಕಿತ್ತು, ಜಾನುವಾರುಗಳನ್ನು ಜಮೀನಿಗೆ ನುಗ್ಗಿಸಿ, ಬೆಳೆ ನಾಶ ಪಡಿಸುವ ಜೊತೆಗೆ ಕಲ್ಲುಕಂಬ ಹಾಗೂ ತಂತಿಬೇಲಿಯನ್ನು ಹೊತ್ತೊಯ್ದಿರುವುದು ಅಕ್ಷಮ್ಯ ಅಪರಾಧ ಎಂದು ಮನವಿಯಲ್ಲಿ ದೂರಲಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ ನಡೆಸಿ ಬಗರ್‌ಹುಕುಂ ಕಾಯ್ದೆಯಡಿ ಈಶ್ವರ ಬಿನ್ ಬಸಪ್ಪ ಅವರಿಗೆ ಜಮೀನು ಮಂಜೂರು ಮಾಡಿಕೊಡಬೇಕು. ಅನಗತ್ಯವಾಗಿ ದಲಿತ ಕುಟುಂಬಕ್ಕೆ ತೊಂದರೆ ಕೊಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ, ಕುಟುಂಬಕ್ಕೆ ರಕ್ಷಣೆ ನೀಡಬೇಕು. ಇಲ್ಲವಾದರೆ ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಭದ್ರಾವತಿ ಸತ್ಯ, ರಾಜ್ಯ ವಿಭಾಗೀಯ ಸಂಚಾಲಕ ರಾಜೇಂದ್ರ ಬಂದಗದ್ದೆ, ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಲಕ್ಷ್ಮಣ ಸಾಗರ್, ಪ್ರಮುಖರಾದ ಮಹಾದೇವಪ್ಪ, ವೆಂಕಪ್ಪ, ಧರ್ಮರಾಜ್ ಮತ್ತಿತರರು ಉಪಸ್ಥಿತರಿದ್ದರು.





