ಮಡಿಕೇರಿ: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
ಕಾರ್ಯಕಾರಿಣಿ ಸಭೆಯಲ್ಲಿ ಮುಜುಗರಕ್ಕೀಡಾದ ಜಿಲ್ಲಾಧ್ಯಕ್ಷ

ಮಡಿಕೇರಿ, ಜು.16: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಸತ್ಯ ವಿರಾಜಪೇಟೆ ತಾಲೂಕು ಘಟಕದ ಸಭೆಯಲ್ಲಿ ಬಹಿರಂಗಗೊಂಡ ಬೆನ್ನಲ್ಲೇ ಮಡಿಕೇರಿ ಸಭೆಯಲ್ಲೂ ಪಕ್ಷದ ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಂಡು ಜಿಲ್ಲಾಧ್ಯಕ್ಷ ಮನುಮುತ್ತಪ್ಪನವರು ಮುಜುಗರಕ್ಕೀಡಾದ ಘಟನೆ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪಅವರ ಅಧ್ಯಕ್ಷತೆಯಲ್ಲಿ ನಗರದ ಬಾಲಭವನದಲ್ಲಿ ನಡೆದ ಮಡಿಕೇರಿ ತಾಲೂಕು ಹಾಗೂ ನಗರ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರು ಮನುಮುತ್ತಪ್ಪನವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ಮತ್ತು ನಗರ ಬಿಜೆಪಿ ಪದಾಧಿಕಾರಿಗಳ ಆಯ್ಕೆಯನ್ನು ಕಾರ್ಯಕರ್ತರ ಅಭಿಪ್ರಾಯ ಸಂಗ್ರ ಹಿಸದೆ ಮಾಡಲಾಗಿದ್ದು, ಕಾರ್ಯ ಕರ್ತರ ಶ್ರಮಕ್ಕೆ ಬೆಲೆ ಇಲ್ಲದಾಗಿದೆ. ಏಕಪಕ್ಷೀಯ ನಿರ್ಧಾರದ ಮೂಲಕ ಅಧಿಕಾರದಲ್ಲಿದ್ದವರಿಗೆ ಮತ್ತೆ ಅಧಿಕಾರ ವನ್ನು ನೀಡಲಾಗಿದೆ. ಪಕ್ಷದಲ್ಲಿ ಕಳೆದ ಅನೇಕ ವರ್ಷಗಳಿಂದ ದುಡಿದ ಹಲವರು ಅಧ್ಯಕ್ಷ ಸ್ಥಾನ ಮತ್ತು ಇನ್ನಿತರ ಪ್ರಮುಖ ಸ್ಥಾನಗಳ ಆಕಾಂಕ್ಷಿಗಳಾಗಿದ್ದಾರೆ. ಎಲ್ಲರನ್ನೂ ಕಡೆಗಣಿಸಿ ಅಧಿಕಾರ ಅನುಭವಿಸಿದವರಿಗೆ ಮಣೆ ಹಾಕಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಆರಂಭದಲ್ಲೇ ಹಲವು ಸದಸ್ಯರು, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕು ಮತ್ತು ನಗರ ಸಮಿತಿ ರಚನೆಯ ಸಂದರ್ಭ ಪಕ್ಷಕ್ಕಾಗಿ ಸಾಕಷ್ಟು ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಮಿತಿಯನ್ನು ರಚಿಸಲಾಗಿದೆ ಎಂದು ನೇರ ಆರೋಪ ಮಾಡುವ ಮೂಲಕ ಜಿಲ್ಲಾಧ್ಯಕ್ಷ ಮುಜುಗರಕ್ಕೆ ಒಳಗಾಗುವಂತೆ ಮಾಡಿದರು. ಸದಸ್ಯರ ಅಸಮಾಧಾನ ಸ್ಪೋಟ ಗೊಳ್ಳುತ್ತಿದ್ದಂತೆಯೇ ದಿಕ್ಕು ತೋಚದೆ ಕಕ್ಕಾಬಿಕ್ಕಿಯಾದ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಶಾಸಕರು ಬಂದ ಬಳಿಕ ಸದಸ್ಯರ ಆಯ್ಕೆ ಪ್ರಕ್ರಿಯೆ ಬಗ್ಗೆ ಇರುವ ಲೋಪದೋಷಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿ ನುಚಿಕೊಳ್ಳಲು ಪ್ರಯತ್ನಿಸಿದರು. ಆದರೆ, ತಾಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಮಾತನಾಡಿ, ಸಮಿತಿಗಳ ರಚನೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಅನಗತ್ಯ ಹೇಳಿಕೆ ನೀಡಬೇಡಿ ಎಂದು ಕಾರ್ಯಕರ್ತರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು ಸಭೆಯಿಂದ ಹೊರ ನಡೆದರು.
ಮುಖಂಡರನ್ನು ಸಭೆಗೆ ಬಾರದಂತೆ ನೋಡಿಕೊಂಡರು
ಎಲ್ಲವೂ ಜಿಲ್ಲಾ ಬಿಜೆಪಿ ಅಂದು ಕೊಂಡಂತೆ ನಡೆದಿದ್ದರೆ ಸಭೆಗೆ ವಿರೋಧ ಪಕ್ಷದ ನಾಯಕರು ಮತ್ತು ಪಕ್ಷದ ಮುಖಂಡರುಗಳಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಆಗಮಿಸಬೇಕಾಗಿತ್ತು. ವರಿಷ್ಠರು ಸಭೆಗೆ ಆಗಮಿಸುವ ಬಗ್ಗೆ ತಾಲೂಕು ಅಧಕ್ಷ ತಳೂರು ಕಿಶೋರ್ ಕುಮಾರ್, ಒಂದು ದಿನದ ಮುಂಚಿತವಾಗಿ ಪತ್ರಿಕೆಗಳ ಮೂಲಕ ಬಹಿರಂಗಗೊಳಿಸಿದ್ದರು. ನಾಯಕರು ಆಗಮಿಸುವ ನಿರೀಕ್ಷೆ ಕಾರ್ಯಕರ್ತರಲ್ಲಿ ಇತ್ತಾದರೂ ಸಭೆಯಲ್ಲಿ ಗದ್ದಲ, ಗೊಂದಲ ಏರ್ಪಡುವ ಸಾಧ್ಯತೆಗಳಿದ್ದ ಬಗ್ಗೆ ಮುನ್ಸೂಚನೆ ದೊರೆತ ಜಿಲ್ಲಾ ಬಿಜೆಪಿ ಪ್ರಮುಖರು ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪಅವರು ಸಭೆಗೆ ಬಾರದಂತೆ ನೋಡಿಕೊಂಡರು ಎನ್ನುವ ಆರೋಪವನ್ನು ಅಸಮಾಧಾನಿತ ಕಾರ್ಯಕರ್ತರು ಮಾಡಿದ್ದಾರೆ. ವೀರಾಜಪೇಟೆ ಸಭೆಯಲ್ಲಿ ಪದಾಧಿ ಕಾರಿಗಳ ಆಯ್ಕೆ ಕ್ರಮದ ವಿರುದ್ಧ ಗುಡುಗಿದ್ದ ಪಕ್ಷದ ಹಿರಿಯರಾದ ಎಂ.ಬಿ. ದೇವಯ್ಯ ಅವರು ಮಡಿಕೇರಿ ಸಭೆಯಲ್ಲೂ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮಧ್ಯಾಹ್ನದ ನಂತರ ಸಭೆಗೆ ಆಗಮಿಸಿದ ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅಸಮಾಧಾನಗೊಂಡ ಕಾರ್ಯಕರ್ತರ ಅನುಪಸ್ಥಿತಿಯಲ್ಲಿ ಸಭೆ ನಡೆಸಿದರು. ಜಿಪಂ ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪಅವರ ಬೆಂಬಲಿಗರು ಸಭೆಗೆ ಗೈರು ಹಾಜ ರಾಗಿದ್ದು ಗಮನಾರ್ಹವಾಗಿತ್ತು.







