ಐವರು ಐಸಿಸ್ ಬೆಂಬಲಿಗರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್
ಹೊಸದಿಲ್ಲಿ, ಜು.16: ಈ ವರ್ಷಾರಂಭದಲ್ಲಿ ಹರಿದ್ವಾರದಲ್ಲಿ ನಡೆದ ಅರ್ಧಕುಂಭಮೇಳದ ವೇಳೆ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿದ್ದ ಆರೋಪದಲ್ಲಿ, ಹರಿದ್ವಾರ ಹಾಗೂ ಮುಂಬೈಗಳ ಐವರು ಇಸ್ಲಾಮಿಕ್ ಸ್ಟೇಟ್(ಐಸಿಸ್) ಬೆಂಬಲಿಗರ ವಿರುದ್ಧ ರಾಷ್ಟ್ರೀಯ ತನಿಖೆ ಸಂಸ್ಥೆಯು(ಎನ್‌ಐಎ) ಔಪಚಾರಿಕ ಆರೋಪ ಪಟ್ಟಿ ದಾಖಲಿಸಲಿದೆ.
ಅಖ್ಲಾಕುರ್ರಹ್ಮಾನ್, ಮುಹಮ್ಮದ್ ಉಸಾಮಾ ಅಲಿಯಾಸ್ ಆದಿಲ್, ಮುಹಮ್ಮದ್ ಆಸಿಂ ಶಾ ಹಾಗೂ ಮುಹಮ್ಮದ್ ಮಅರಾಜ್ ಅಲಿಯಾಸ್ ಮೋನು ಎಂಬವರನ್ನು ಈ ವರ್ಷ ಜನವರಿಯಲ್ಲಿ ರೂರ್ಕಿ ಹಾಗೂ ಹರಿದ್ವಾರಗಳಿಂದ ಬಂಧಿಸಲಾಗಿದ್ದರೆ, 5ನೆಯ ಐಸಿಸ್ ಬೆಂಬಲಿಗ ಮೊಹ್ಸಿನ್ ಇಬ್ರಾಹೀಂ ಸೈಯದ್ ಎಂಬಾತನನ್ನು ಒಂದು ತಿಂಗಳ ಬಳಿಕ ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಬಂಧಿಸಿತ್ತು.
ಬಳಿಕ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.
ಹರಿದ್ವಾರದಲ್ಲಿ ಭಕ್ತರು ಗಂಗಾ ಸ್ನಾನ ಮಾಡುವ ಹರಿ ಕಿ ಪೌರಿಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಇರಿಸಲು ಈ ಹುಡುಗರು ಯೋಜನೆ ರೂಪಿಸಿದ್ದರು. ಅವುಗಳನ್ನು ಇರಿಸಲು ಆಗಮನ ಮತ್ತು ನಿರ್ಗಮನ ದ್ವಾರಗಳು ಹಾಗೂ ಸೇತುವೆಯೊಂದನ್ನು ಅವರು ಗುರುತಿಸಿದ್ದರೆಂದು ಅಜ್ಞಾತವಾಗುಳಿಯ ಬಯಸಿದ ತನಿಖೆದಾರರೊಬ್ಬರು ತಿಳಿಸಿದ್ದಾರೆ.
ಆರೋಪಿಗಳಿಗೆ ಸಿರಿಯ ಮೂಲದ ಐಸಿಸ್ ನೇಮಕಾತಿದಾರ ಶಫಿ ಆರ್ಮರ್ ಅಲಿಯಾಸ್ ಯೂಸುಫ್-ಅಲ್ ಹಿಂದ್ ಎಂಬಾತ ಬಾಂಬ್ ತಯಾರಿಯ ಸಾಹಿತ್ಯವನ್ನು ಒದಗಿಸಿದ್ದನು. ಬೆಂಕಿ ಕಡ್ಡಿಯ ತುದಿಯಲ್ಲಿರುವ ಸ್ಫೋಟದ ವಸ್ತುವನ್ನು ಬಳಸಿ ಬಾಂಬ್ ತಯಾರಿಸುವಂತೆ ಅವರಿಗೆ ಸೂಚಿಸಲಾಗಿತ್ತು. ಅದಕ್ಕಾಗಿ ಆರೋಪಿಗಳು ಭಾರೀ ಸಂಖ್ಯೆಯ ಬೆಂಕಿ ಪೆಟ್ಟಿಗೆಗಳನ್ನು ಖರೀದಿಸಿದ್ದರೆಂದು ಅವರು ಹೇಳಿದ್ದಾರೆ.





