ಕೆಪಿಎಸ್ಸಿಯಿಂದ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ
ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ
ಬೆಂಗಳೂರು, ಜು.16: ಕೆಪಿಎಸ್ಸಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಲೋಕೋಪಯೋಗಿ ಇಲಾಖೆಯಲ್ಲಿ ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ಮರು ನೇಮಕಾತಿ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಹಲವು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ನೊಂದ ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೊಂದ ಅಭ್ಯರ್ಥಿ ಸುನಿಲ್, 2003-04 ನೆ ಸಾಲಿನಲ್ಲಿ ಇಲಾಖೆಯಲ್ಲಿನ 1347 ಇಂಜಿನಿಯರ್‌ಗಳ ನೇಮಕಾತಿಯಲ್ಲಿ 846 ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಇಂಜಿನಿಯರ್‌ಗಳ ನೇಮಕವಾಗಿತ್ತು. ನಂತರ 2005ರಲ್ಲಿ ಇವರನ್ನು ವಿಲೀನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇದರಲ್ಲಿ ಹಲವರಿಗೆ ಅನ್ಯಾಯ ವಾಗಿತ್ತು. ಆದುದರಿಂದ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೇಸು ದಾಖಲಿಸಲಾಗಿತ್ತು. ಈ ಸಂಬಂಧನವೆಂಬರ್ 11, 2015 ರಂದು ಸುಪ್ರೀಂ ಕೋರ್ಟ್ 2001ರ ಬ್ಯಾಕ್‌ಲಾಗ್ ವಿಶೇಷ ನೇಮಕಾತಿ ನಿಯಮಾ ವಳಿಯನ್ನು ಅನುಸರಿಸುವಂತೆ ತೀರ್ಪು ನೀಡಲಾಗಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎ.20 ರಂದು ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್‌ಗಳ ಪುನರ್ ನೇಮಕದ ಅಂತಿಮ ಪಟ್ಟಿಬಿಡುಗಡೆ ಮಾಡಿದೆ. ಆದರೆ, ಇದಕ್ಕೂ ಮೊದಲು ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಇದೀಗ ಆಯೋಗವು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೆರಿಟ್‌ಅನ್ನು ಪರಿಗಣಿಸದೇ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ಸುಮಾರು 80 ಕ್ಕೂ ಹೆಚ್ಚು ಅಭ್ಯರ್ಥಿಗಳು ಸಾಮಾನ್ಯ ಕೋಟಾದಡಿ ಯಲ್ಲಿ ಆಯ್ಕೆಯಾಗಲು ಅರ್ಹರಿದ್ದರೂ, ಅವರನ್ನು ಪರಿಗಣಿಸಿಲ್ಲ. ಯಾರು ಆಯ್ಕೆಗೆ ಅನರ್ಹರಿದ್ದಾರೋ ಅವರನ್ನು ಆಯ್ಕೆ ಮಾಡಲಾಗಿದ್ದು, ಅತ್ಯುತ್ತಮ ಮೆರಿಟ್ (ಶೇ.65) ಪಡೆದ ಅಭ್ಯರ್ಥಿಗೂ ಅವಕಾಶ ಸಿಗದಂತಾ ಗಿದೆ. ಹಾಗೂ ಇದೀಗ ಆಯ್ಕೆಯಾಗಿರುವ ಕೆಲವರು ಬೇರೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಅವರಿಗೆ ಅವಕಾಶ ಸಿಕ್ಕಿದೆ ಎಂದು ಅವರು ತಿಳಿಸಿದರು.
ಆದುದರಿಂದ ಕೂಡಲೇ ಸರಕಾರ ಮತ್ತು ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯನ್ನು ಹಿಂಪಡೆಯಬೇಕು. ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಸಾಮಾನ್ಯ ವರ್ಗದಲ್ಲಿ ಮೆರಿಟ್ ಬಂದಿರುವವರಿಗೆ ಮೊದಲ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ನೊಂದ ಅಭ್ಯರ್ಥಿಗಳು ಸರಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್, ಅಶೋಕ್ ಸೇರಿದಂತೆ ಹಲವು ನೊಂದ ಅಭ್ಯರ್ಥಿಗಳಿದ್ದರು.







