ಝಿಕಾ ವೈರಸ್ ಭಯ: ಒಲಿಂಪಿಕ್ಸ್‌ನಿಂದ ರಾವೊನಿಕ್, ಹಾಲೆಪ್ ಹಿಂದಕ್ಕೆ

ಪ್ಯಾರಿಸ್, ಜು.16: ಝಿಕಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿಂಬಲ್ಡನ್ ರನ್ನರ್-ಅಪ್ ಮಿಲೊಸ್ ರಾವೊನಿಕ್ ಹಾಗೂ ವಿಶ್ವದ ನಂ.5ನೆ ಮಹಿಳಾ ಆಟಗಾರ್ತಿ ಸಿಮೊನಾ ಹಾಲೆಪ್ ಮುಂಬರುವ ಒಲಿಂಪಿಕ್ ಗೇಮ್ಸ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
‘‘ಅತ್ಯಂತ ಭಾರದ ಹೃದಯದಿಂದ ರಿಯೋ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸುತ್ತಿರುವೆ. ನನ್ನ ಕುಟುಂಬ ಹಾಗೂ ಕೋಚ್‌ಗಳೊಂದಿಗೆ ಚರ್ಚಿಸಿದ ಬಳಿಕ, ಝಿಕಾ ವೈರಸ್ ಸಹಿತ ಹಲವು ಆರೋಗ್ಯ ವಿಷಯಕ್ಕೆ ಸಂಬಂಧಿಸಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಇದೊಂದು ಕಠಿಣ ವೈಯಕ್ತಿಕ ಆಯ್ಕೆ. ಗೇಮ್ಸ್‌ಗೆ ತೆರಳುತ್ತಿರುವ ಇತರ ಅಥ್ಲೀಟ್‌ಗಳಿಗೆ ನನ್ನ ಈ ನಿರ್ಧಾರದಿಂದ ಯಾವುದೇ ಪರಿಣಾಮ ಬೀರದಿರಲಿ ಎಂದು ಆಶಿಸುವೆ’’ ಎಂದು ಕೆನಡಾದ ರಾವೊನಿಕ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ವಿಶ್ವದ ನಂ.7ನೆ ಆಟಗಾರ ರಾವೊನಿಕ್ ರವಿವಾರ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ವಿರುದ್ಧ ಸೋತಿದ್ದರು.
24ರ ಹರೆಯದ ಹಾಲೆಪ್ ಕೂಡ ಒಲಿಂಪಿಕ್ ಗೇಮ್ಸ್‌ನಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಆಗಸ್ಟ್ 5 ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದವರ ಅಂತಿಮ ಪಟ್ಟಿಯನ್ನು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್(ಐಟಿಎಫ್) ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಹಾಲೆಪ್ ಈ ನಿರ್ಧಾರ ಪ್ರಕಟಿಸಿದ್ದಾರೆ.
‘‘ಒಲಿಂಪಿಕ್ ಗೇಮ್ಸ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಲು ಬೇಸರವಾಗುತ್ತದೆ. ಝಿಕಾ ವೈರಸ್ ಬಗೆಗಿನ ಅಪಾಯವೇ ನನ್ನ ಈ ನಿರ್ಧಾರಕ್ಕೆ ಕಾರಣ. ನನ್ನ ವೈದ್ಯರು ಹಾಗೂ ಕುಟುಂಬ ಸದಸ್ಯರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ನನ್ನ ವೃತ್ತಿಜೀವನ ಹಾಗೂ ಆರೋಗ್ಯದ ದೃಷ್ಟಿಯಿಂದ ಅಂತಿಮ ನಿರ್ಧಾರಕ್ಕೆ ಬಂದಿದ್ದೇನೆ’’ ಎಂದು ಹಾಲೆಪ್ ಹೇಳಿದ್ದಾರೆ.
ಅಮೆರಿಕದ ಜಾನ್ ಇಸ್ನೆರ್, ಆಸ್ಟ್ರೀಯದ ಡೊಮಿನಿಕ್ ಥಿಯೆಮ್, ಆಸ್ಟ್ರೇಲಿಯದ ಬೆರ್ನಾರ್ಡ್ ಟಾಮಿಕ್ ಹಾಗೂ ನಿಕ್ ಕಿರ್ಗಿಯೊಸ್, ಸ್ಪೇನ್‌ನ ಹಿರಿಯ ಆಟಗಾರ ಫೆಲಿಸಿಯಾನೊ ಲೊಪೆಝ್ ವಿವಿಧ ಕಾರಣಗಳಿಂದಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿಲ್ಲ. ಇಟಲಿಯ ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಫ್ರಾನ್ಸೆಸ್ಕಾ ಸ್ಚಿಯಾವೊನ್ ಒಲಿಂಪಿಕ್ಸ್ ಅವಕಾಶವನ್ನು ತಿರಸ್ಕರಿಸಿದರೆ, ವಿಶ್ವದ ಮಾಜಿ ನಂ.1 ಆಟಗಾರ್ತಿಯರಾದ ಮರಿಯಾ ಶರಪೋವಾ ಹಾಗೂ ವಿಕ್ಟೋರಿಯ ಅಝರೆಂಕಾ ಒಲಿಂಪಿಕ್ಸ್‌ನಿಂದ ವಂಚಿತರಾಗಿದ್ದಾರೆ.
ಶರಪೋವಾ ಉದ್ದೀಪನಾ ದ್ರವ್ಯ ಸೇವನೆಗೆ ಸಂಬಂಧಿಸಿ ನಿಷೇಧಕ್ಕೆ ಒಳಗಾಗಿದ್ದರೆ, ಅಝರೆಂಕಾ ವೈಯಕ್ತಿಕ ಕಾರಣಕ್ಕೆ ಸ್ಪರ್ಧಿಸುತ್ತಿಲ್ಲ. ರಾವೊನಿಕ್ ನಿರ್ಧಾರವನ್ನು ಗೌರವಿಸಿರುವ ಟೆನಿಸ್ ಕೆನಡಾ, ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ರಾವೊನಿಕ್ ಬದಲಿಗೆ 43ರ ಹರೆಯದ ಡೇನಿಯಲ್ ನೆಸ್ಟರ್‌ರನ್ನು ಆಯ್ಕೆ ಮಾಡಿದೆ.
ಒಲಿಂಪಿಕ್ಸ್‌ಗೆ ರಫೆಲ್ ನಡಾಲ್
ಪ್ಯಾರಿಸ್, ಜು.16: ಸ್ಪೇನ್‌ನ ಸೂಪರ್‌ಸಾರ್ ರಫೆಲ್ ನಡಾಲ್ ಐಟಿಎಫ್‌ಗೆ ಮನವಿ ಸಲ್ಲಿಸುವ ಮೂಲಕ ಒಲಿಂಪಿಕ್ಸ್ ಟೆನಿಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್ ಒಲಿಂಪಿಕ್ಸ್ ಮಾನದಂಡವನ್ನು ತಲುಪಿಲ್ಲ. ಗಾಯದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದಿದ್ದ ನಡಾಲ್, ವಿಂಬಲ್ಡನ್ ಟೂರ್ನಿಯಿಂದಲೂ ದೂರವುಳಿದಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ನಡಾಲ್ ಮಂಡಿನೋವಿನಿಂದಾಗಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ವಂಚಿತರಾಗಿದ್ದರು.
ಇದೀಗ ರಿಯೋ ಗೇಮ್ಸ್‌ನಲ್ಲಿ ಸ್ಪರ್ಧಿಸಲಿರುವ ನಡಾಲ್ ಆಗಸ್ಟ್ 5 ರಂದು ರಿಯೋ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಸ್ಪೇನ್ ತಂಡದ ಧ್ವಜಧಾರಿಯಾಗಿ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಆ್ಯಂಡಿ ಮರ್ರೆ ಹಾಗೂ ಸೆರೆನಾ ವಿಲಿಯಮ್ಸ್ ಕ್ರಮವಾಗಿ ಪುರುಷರ ಹಾಗು ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ಹೋರಾಡಲಿದ್ದಾರೆ ಎಂದು ಐಟಿಎಫ್ ಈಗಾಗಲೇ ಖಚಿತಪಡಿಸಿದೆ.
ವಿಶ್ವದ ನಂ.1 ಆಟಗಾರ ಸರ್ಬಿಯದ ನೊವಾಕ್ ಜೊಕೊವಿಕ್ ಹಾಗೂ 17 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಸ್ವಿಸ್‌ನ ರೋಜರ್ ಫೆಡರರ್ ಬ್ರೆಝಿಲ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ.







