ಕೊಣಾಜೆ: ಕೆರೆಬೈಲುಗುಡ್ಡೆ ನೂತನ ಅಂಗನವಾಡಿ ಲೋಕಾರ್ಪಣೆ

ಉಳ್ಳಾಲ, ಜು.16: ಉಳ್ಳಾಲ ನಗರ ವ್ಯಾಪ್ತಿಯ ಕೆರೆಬೈಲುಗುಡ್ಡೆ ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಆಮಂತ್ರಣ ಪತ್ರಿಕೆಯಲ್ಲಿ ಶಾಸಕ, ಸಚಿವ ಖಾದರ್ ಅವರ ಹೆಸರಿಲ್ಲದೆ ಶಿಷ್ಟಾಚಾರ ಉಲ್ಲಂಘನೆಯಾದ ವಿಚಾರದಲ್ಲಿ ಶುಕ್ರವಾರ ಸ್ಥಗಿತಗೊಂಡು ಬಳಿಕ ಮುಂದೂಡಲಾಗಿತ್ತು. ಕೊನೆಗೂ ಶನಿವಾರ ಖಾದರ್ ಉಪಸ್ಥಿತಿಯಲ್ಲೇ ಅಂಗನವಾಡಿ ಕಟ್ಟಡವು ಉದ್ಘಾಟನೆಗೊಂಡಿತು.
ಕೆರೆಬೈಲ್‌ನ ಈ ಹಿಂದಿನ ಹಳೆಯ ಅಂಗನವಾಡಿ ಕಟ್ಟಡ ಕೆಡವಿ ನಗರಸಭೆಯ 7 ಲಕ್ಷ ಅನುದಾನದೊಂದಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಪಾಳ್ಗೊಳ್ಳುವಿಕೆಯಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿತ್ತು. ನೂತನ ಕಟ್ಟಡವನ್ನು ಶುಕ್ರವಾರದಂದು ಬೆಳಗ್ಗೆ ಲೋಕಾರ್ಪಣೆ ಮಾಡಲೆಂದು ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಸರಕಾರಿ ಶಿಷ್ಟಾಚಾರದ ಪ್ರಕಾರ ನಗರಸಭೆಯ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳಲ್ಲಿ ಸ್ಥಳೀಯ ಶಾಸಕರಿಗೆ ಅಧ್ಯಕ್ಷತೆಯ ಸ್ಥಾನವನ್ನು ಕಲ್ಪಿಸಬೇಕು. ಆದರೆ ಕೆರೆಬೈಲ್‌ನ ನೂತನ ಅಂಗನವಾಡಿಯ ಕಟ್ಟಡದ ಸ್ವಾಗತ ಸಮಿತಿ ಮತ್ತು ಉಳ್ಳಾಲ ನಗರಸಭಾ ಆಡಳಿತವು ಸೇರಿ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ನಡೆಸಿ ಖಾದರ್ ಅವರ ಹೆಸರನ್ನೇ ನಮೂದಿಸಿರಲಿಲ್ಲ. ಬಳಿಕ ಈ ವಿಷಯದಲ್ಲಿ ವಾದ ವಿವಾದ ನಡೆದು ಶನಿವಾರ ಸಚಿವ ಖಾದರ್‌ರ ಸಮಕ್ಷಮದಲ್ಲೇ ಉದ್ಘಾಟನೆ ನಡೆಸುವುದಾಗಿ ನಿರ್ಧರಿಸಲಾಗಿತ್ತು.
ಶನಿವಾರ ಬೆಳಗ್ಗೆ ಸಚಿವ ಯು.ಟಿ ಖಾದರ್ ಅಂಗನವಾಡಿಗೆ ಭೇಟಿ ನೀಡಿ ಮುಂದೆ ನೂತನ ಕೇಂದ್ರಕ್ಕೆ ಬೇಕಾದ ಆವರಣ ಗೋಡೆ,ಇನ್ನಿತರ ಸೌಲಭ್ಯಗಳ ಬಗ್ಗೆ ಎಲ್ಲರ ಜೊತೆ ಚರ್ಚಿಸಿ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ನಗರಾಧ್ಯಕ್ಷ ಹುಸೇನ್ ಕುಂಞಿಮೋನು, ಮನುಷ್ಯರೆಂದ ಮೇಲೆ ಸಣ್ಣಪುಟ್ಟ ತಪ್ಪುಗಳು ನಡೆಯುವುದು ಸಹಜ. ಸಚಿವ ಖಾದರ್‌ರ ಆಜ್ಞೆಯ ಮೇರೆಗೆ ಇಂದು ನಾನು ಕಟ್ಟಡವನ್ನು ಉದ್ಘಾಟಿಸಿದ್ದೇನೆ. ಮುಂದೆಂದಿಗೂ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೇ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸ್ಥಳೀಯ ನಗರಸಭಾ ಸದಸ್ಯೆ ಸರಿತಾ ಜೀವನ್, ನಗರ ಸಭಾ ಪ್ರತಿಪಕ್ಷ ನಾಯಕಿ ಮಹಾಲಕ್ಷ್ಮೀ, ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಸದಸ್ಯರಾದ ಮುಸ್ತಪಾ ಅಬ್ದುಲ್ಲಾ, ಯು.ಇಸ್ಮಾಯೀಲ್, ಮಾಜಿ ಪುರಸಭಾ ಅಧ್ಯಕ್ಷ ಬಾಝಿಲ್ ಡಿಸೋಜ, ಕೊರಗತನಿಯ ಸೇವಾ ಸಮಿತಿ ಅಧ್ಯಕ್ಷ ಮೋಹನ್ ದಾಸ್ ಬಗಂಬಿಲ, ಸ್ಥಳೀಯರಾದ ನಾರಾಯಣ್ ಕೆರೆಬೈಲು, ಅಂಗನವಾಡಿ ಮೇಲ್ವಿಚಾರಕಿ ಶಂಕರಿ, ಶಿಕ್ಷಕಿ ತುಳಸಿ, ಜೀವನ್ ಕುಮಾರ್ ಕೆರೆಬೈಲ್ ಉಪಸ್ಥಿತರಿದ್ದರು.







