ಸುಳ್ಯ: ಆದಾಯ ತೆರಿಗೆ ಘೋಷಣೆ ಯೋಜನೆ ಕುರಿತು ವಿಚಾರ ಸಂಕಿರಣ

ಸುಳ್ಯ, ಜು.16: ಆದಾಯ ಘೋಷಣೆ ಯೋಜನೆ ಕುರಿತಾಗಿ ವಿಚಾರ ಸಂಕಿರಣ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಸುಳ್ಯದ ರೋಟರಿ, ಲಯನ್ಸ್ ಕ್ಲಬ್, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಹಾಗೂ ಆದಾಯ ತೆರಿಗೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಕ್ಲಬ್ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಆದಾಯ ತೆರಿಗೆ ಅಪರ ಆಯುಕ್ತ ಆರ್.ಎನ್.ಸಿದ್ದಪ್ಪಾಜಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ದೇಶದ ರಕ್ಷಣೆ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಹಾಯಧನ ನೀಡಲು ಸಾಕಷ್ಟು ಸಂಪನ್ಮೂಲದ ಅಗತ್ಯವಿದ್ದು, ಜನರು ಸರಿಯಾಗಿ ತೆರಿಗೆ ಪಾವತಿಸುವುದು ಅನಿವಾರ್ಯವಾಗಿದೆ. ಆದಾಯ ತೆರಿಗೆ ಪಾವತಿಸುವ ಕುರಿತು ಸಾಕಷ್ಟು ಯೋಜನೆಗಳನ್ನು ಪ್ರಕಟಿಸಲಾಗಿದೆ. ಆದಾಯ ಘೋಷಣೆ ಯೋಜನೆ-2016 ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರು ತಮ್ಮ ಆದಾಯ ವಿವರಗಳನ್ನು ಘೋಷಿಸಿದಲ್ಲಿ ಕಡಿಮೆ ದಂಡದೊಂದಿಗೆ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಸಾಧ್ಯವಿದೆ. ಈ ಯೋಜನೆಯಡಿ ಆದಾಯ ಘೊಷಣೆ ಮಾಡುವ ವ್ಯಕ್ತಿಗಳಿಗೆ ಶೇ.30ರ ಕರ ಹಾಗೂ ಶೇ.ಏಳೂವರೆ ದಂಡದೊಂದಿಗೆ ಆದಾಯ ಸಕ್ರಮಗೊಳಿಸಬಹುದು. ಈ ಯೋಜನೆ ಮುಗಿದ ಬಳಿಕ ತೆರಿಗೆ ಪಾವತಿಸಲು ಮುಂದಾದರೆ ಇಲಾಖೆ ಶೇ.300ರಷ್ಟು ತೆರಿಗೆ ವಿಧಿಸಲು ಸಾಧ್ಯವಿದೆ ಎಂದವರು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಗಿರಿಜಾ ಶಂಕರ ಅಧ್ಯಕ್ಷತೆ ವಹಿಸಿದ್ದರು. ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಎ.ಚಂದ್ರಕುಮಾರ್, ಪುತ್ತೂರಿನ ಆದಾಯ ತೆರಿಗೆ ಅಧಿಕಾರಿ ರಾಬರ್ಟ್ ಕ್ಯಾಸ್ಟಾಲಿನೋ, ವರ್ತಕ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ವೇದಿಕೆಯಲ್ಲಿದ್ದರು.
ಚಾರ್ಟರ್ಡ್ ಎಕೌಂಟೆಂಟ್ ಗಣೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸ ಹೊಸ ಯೋಜನೆಗಳು ಬರುವುದರಿಂದ ಜನರು ಆದಾಯ ತೆರಿಗೆ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಲು ಆದಾಯ ತೆರಿಗೆ ಇಲಾಖೆ ಎಲ್ಲಡೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.







