ವಿಫಲ ಸೇನಾ ದಂಗೆ: ಆಡಳಿತದ ಮೇಲೆ ಬಿಗಿ ಹಿಡಿತಕ್ಕೆ ಮುಂದಾದ ಎರ್ದೊಗಾನ್

ಅಂಕಾರಾ, ಜು.17: ಕಳೆದ ಒಂದು ದಶಕದಲ್ಲಿ ಐದನೇ ಬಾರಿಗೆ ಕೇವಲ ಐದು ಗಂಟೆಯಲ್ಲಿ ಟರ್ಕಿ ಸೇನಾ ದಂಗೆ ವಿಫಲವಾಗಿದೆ. ಆದರೆ ಅಧ್ಯಕ್ಷರಿಗೆ ನಿಷ್ಠರಾಗಿರುವ ಹಾಗೂ ವಿರೋಧಿ ಬಣಗಳ ನಡುವೆ ನಡೆದ ಸಂಘರ್ಷದಲ್ಲಿ 161 ಮಂದಿ ಮೃತಪಟ್ಟು 1400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ವಿಫಲ ದಂಗೆಯಿಂದಾಗಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರು ಆಡಳಿತದ ಮೇಲಿನ ಹಿಡಿತವನ್ನು ಬಿಗಿಗೊಳಿಸುವ ಎಲ್ಲ ಸಾಧ್ಯತೆಗಳಿವೆ. ವಿರೋಧಿಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ಶುಕ್ರವಾರ ರಾತ್ರಿ ಕ್ಷಿಪ್ರಕ್ರಾಂತಿಗೆ ಮುಂದಾದ ಸೇನಾ ಬಣ, ಯುದ್ಧ ಟ್ಯಾಂಕರ್ ಹಾಗೂ ಯುದ್ಧವಿಮಾನಗಳನ್ನು ರಾಜಧಾನಿ ಅಂಕಾರಾ ಹಾಗೂ ಹಣಕಾಸು ರಾಜಧಾನಿ ಇಸ್ತಂಬುಲ್ ಗೆ ಕಳುಹಿಸಿತ್ತು. ಅಧ್ಯಕ್ಷ ಎರ್ದೊಗಾನ್ ಅವರು, ಮರ್ಮರೀಸ್ ನ ಮೆಡಿಟರೇನಿಯನ್ ರೆಸಾರ್ಟ್ ನಲ್ಲಿ ವಿಹಾರಕ್ಕೆ ತೆರಳಿದ್ದಾಗ ಅವರನ್ನು ಪದಚ್ಯುತಗೊಳಿಸುವ ಹುನ್ನಾರ ನಡೆದಿತ್ತು. ಈ ವಿಫಲ ದಂಗೆಗೆ ಎರ್ದೊಗಾನ್ ಅವರ ಕಟ್ಟಾ ವಿರೋಧಿ ಅಮೆರಿಕ ಮೂಲದ ಒಲೆರಿಕ್ ಫೆತೇವುಲ್ಲಾ ಗುಲೇನ್ ಅವರ ಕುಮ್ಮಕ್ಕು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಡುಕೋರ ಸೇನೆ ಇಸ್ತಾಂಬುಲ್ ಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಬಳಿ ತಡೆ ಒಡ್ಡಿತು. ಜತೆಗೆ ಉದ್ರಿಕ್ತ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ವಿಡಿಯೊ ದೃಶ್ಯಾವಳಿ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಯುದ್ಧ ಟ್ಯಾಂಕ್ ಗಳು ಜನರನ್ನು ನಿರ್ದಯವಾಗಿ ಹತ್ಯೆ ಮಾಡುವ ದೃಶ್ಯಗಳೂ ಕಂಡುಬಂದವು. ಅಂಕಾರಾದಲ್ಲಿರುವ ಸಂಸತ್ ಭವನದ ಸುತ್ತಲೂ ದಂಗೆಕೋರರು ಜಮಾಯಿಸಿದ್ದರು. ಬಾಂಬ್ ಸ್ಫೋಟದಿಂದ ಸಂಸತ್ ಭವನಕ್ಕೆ ಹಾನಿಯಾಗಿದೆ. ಪೊಲೀಸರು ಹಲವೆಡೆಗಳಲ್ಲಿ ಬಂಡುಕೋರರ ವಿರುದ್ಧ ಹೋರಾಟ ನಡೆಸಿದರು.







