ಸೌದಿ ಅರೇಬಿಯ: ವಿದೇಶಿ ಕಾರ್ಮಿಕರ ಪಾಸ್ ಪೋರ್ಟ್‌ನ್ನು ತನ್ನ ಬಳಿ ಇಟ್ಟುಕೊಂಡರೆ ಸ್ಪೋನ್ಸರ್‌ಗೆ 2,000 ರಿಯಾಲ್ ದಂಡ

ರಿಯಾದ್,ಜುಲೈ 17: ವಿದೇಶಿ ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನು ಹಿಡಿದಿಟ್ಟುಕೊಂಡು ಅವರಿಗೆ ಕಿರುಕುಳ ನೀಡುವ ಸಂಪ್ರದಾಯಕ್ಕೆ ಸೌದಿ ಕಾರ್ಮಿಕ ಸಚಿವಾಲಯ ನಿಯಂತ್ರಣ ತರಲು ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಇನ್ನುಮೇಲೆ ಸ್ಪೋನ್ಸರ್‌ಗಳು ತಮ್ಮ ಬಳಿ ಕೆಲಸ ಮಾಡುವ ಕಾರ್ಮಿಕರ ಅನುಮತಿ ಪಡೆದೇ ಅವರ ಪಾಸ್‌ಪೋರ್ಟ್‌ಗಳನ್ನು ತಮ್ಮ ಕೈಯಲ್ಲಿಟ್ಟುಕೊಳ್ಳಬೇಕು. ಕಾರ್ಮಿಕ ತನ್ನ ಪಾಸ್‌ಪೋರ್ಟ್‌ನ್ನು ಸ್ಪೋನ್ಸರ್ ಕೈಯಲ್ಲಿ ಕೊಡುವುದಿದ್ದರೆ ಹಾಗೂ ಸ್ಪೋನ್ಸರ್ ಕಾರ್ಮಿಕನಿಂದ ಪಾಸ್‌ಪೋರ್ಟನ್ನು ಪಡೆಯುವುದಿದ್ದರೆ ಸ್ಪೋನ್ಸರ್ ಕಾರ್ಮಿಕ ನೀಡಿದ ಅನುಮತಿ ಪತ್ರ ಹೊಂದಿರಬೇಕಾಗಿದೆ ಎಂದು ವರದಿಯಾಗಿದೆ.
ಅರಬಿ ಭಾಷೆ ಮತ್ತು ಕಾರ್ಮಿಕನ ಪ್ರಾದೇಶಿಕ ಭಾಷೆಯಲ್ಲಿ ಈ ಅನುಮತಿ ಪತ್ರ ಬರೆದು ಕಾರ್ಮಿಕ ಹಾಗೂ ಸ್ಪೋನ್ಸರ್ ಇಬ್ಬರೂ ಅದಕ್ಕೆ ಸಹಿಹಾಕಬೇಕು. ಕಾರ್ಮಿಕರ ಪಾಸ್‌ಪೋರ್ಟ್ ಹೊಂದಿದ್ದು ಇಂತಹ ಅನುಮತಿ ಪತ್ರ ಇಲ್ಲದ ಸ್ಪೋನ್ಸರ್‌ಗೆ 2,000 ಸೌದಿ ರಿಯಾಲ್ ದಂಡ ವಿಧಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯದ ವಕ್ತಾರ ಖಾಲಿದ್ ಅಬಾ- ಖೈಲ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಂದುವೇಳೆ ಸ್ಪೋನ್ಸರ್ ಅನೇಕ ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನು ತನ್ನ ವಶ ಇಟ್ಟುಕೊಂಡಿದ್ದರೆ ಅದಕ್ಕೆ ಸಮಾನವಾದ ದಂಡ ತೆರಬೇಕಾಗುತ್ತದೆ.
ಸಣ್ಣ ಉದ್ದಿಮೆಗಳ ಮಾಲಕರಾದ ಸ್ಥಳೀಯ ಸ್ಪೋನ್ಸರ್‌ಗಳು ವಿದೇಶಿ ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನು ತೆಗೆದಿಟ್ಟು ಕಿರುಕುಳ ನೀಡುತ್ತಿದ್ದಾರೆಂದು ಬಹಳಷ್ಟು ದೂರುಗಳು ಕಾರ್ಮಿಕ ಸಚಿವಾಲಯಕ್ಕೆ ಬಂದ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ ಹಾಗೂ ವಿಷನ್-20 ಯೋಜನೆಯನ್ವಯ ಈನಿರ್ಧಾರ ತಳೆಯಲಾಗಿದೆ ಎಂದು ವರದಿ ತಿಳಿಸಿದೆ.







