ಅಮೆರಿಕದಿಂದ ಫತೇವುಲ್ಲಾ ಗುಲೇನ್ ಗಡೀಪಾರಿಗೆ ಟರ್ಕಿ ಆಗ್ರಹ

ಅಂಕಾರಾ, ಜು.17: ಟರ್ಕಿಯಲ್ಲಿ ಸೇನಾ ಕ್ಷಿಪ್ರಕ್ರಾಂತಿ ವಿಫಲವಾದ ಬೆನ್ನಲ್ಲೇ ಅಮೆರಿಕ ಹಾಗೂ ಟರ್ಕಿ ನಡುವಿನ ಸಂಘರ್ಷ ಸ್ಥಿತಿ ಉಲ್ಬಣಿಸಿದೆ.
ಟರ್ಕಿಯಿಂದ ಗಡೀಪಾರು ಮಾಡಲಾದ ಉದ್ಯಮಿ ಫತೇವುಲ್ಲಾ ಗುಲೇನ್, ಟರ್ಕಿಯಲ್ಲಿ ಹಿಂಸಾಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗಾನ್ ಆಪಾದಿಸಿದ್ದು, ಅಮೆರಿಕ ತಕ್ಷಣ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ವಿಫಲ ಸೇನಾ ಕ್ಷಿಪ್ರಕ್ರಾಂತಿಯಲ್ಲಿ ತಮ್ಮ ಕೈವಾಡ ಇಲ್ಲ ಎಂದು ಪೆನ್ಸಲ್ವೇನಿಯಾದಲ್ಲಿ ವಾಸವಿರುವ ಗುಲೇನ್ ಹೇಳಿಕೊಂಡಿದ್ದಾರೆ. ಈ ಕ್ಷಿಪ್ರ ಕ್ರಾಂತಿ ಪ್ರಯತ್ನವನ್ನು ಅವರು ಖಂಡಿಸಿದ್ದಾರೆ.
ಈ ಸಂಚಿನಲ್ಲಿ ಷಾಮೀಲಾಗಿದ್ದಾರೆ ಎಂದು ಟರ್ಕಿ ನಂಬುವ ವ್ಯಕ್ತಿಗಳ ವಿಚಾರಣೆ ನಡೆಸಲು ಟರ್ಕಿ ಅಗತ್ಯ ವಿಧಿವಿಧಾನಗಳನ್ನು ಗೌರವಿಸಬೇಕಾಗುತ್ತದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಸಿ ಜಾನ್ ಕೆರ್ರಿ, ಟರ್ಕಿ ರಕ್ಷಣಾ ಕಾರ್ಯದರ್ಶಿಗೆ ದೂರವಾಣಿ ಮೂಲಕ ನಡೆಸಿದ ಮಾತುಕತೆ ವೇಳೆ ಸ್ಪಷ್ಟಪಡಿಸಿದ್ದಾರೆ.
ಎರ್ದೊಗಾನ್ ಅವರ ಪದಚ್ಯುತಿಯ ಪ್ರಯತ್ನದಲ್ಲಿ ಅಮೆರಿಕದ ಕೈವಾಡವಿದೆ ಎಂದು ಟರ್ಕಿಯ ಹಿರಿಯ ಅಧಿಕಾರಿಯೊಬ್ಬರು ನೇರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆರ್ರಿ, "ಅಮೆರಿಕದ ಪಾತ್ರ ಇದೆ ಎನ್ನುವುದು ಶುದ್ಧ ಸುಳ್ಳು ಹಾಗೂ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹಾನಿಕಾರಕ" ಎಂದು ಟರ್ಕಿಯ ವಿದೇಶಾಂಗ ಸಚಿವರಿಗೆ ಖಾರವಾಗಿ ಹೇಳಿದ್ದಾರೆ.
ನೆರೆಯ ಸಿರಿಯಾ ಹಾಗೂ ಇರಾಕ್ ನಲ್ಲಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ದ ಲೆವಂಟ್ ಉಗ್ರ ಸಂಘಟನೆಯನ್ನು ಗುರಿ ಮಾಡಿ ಅಮೆರಿಕ ಯುದ್ಧವಿಮಾನಗಳು ದಾಳಿ ಮಾಡಲು ಬಳಕೆಯಾಗುತ್ತಿದ್ದ ವಾಯುಪ್ರದೇಶವನ್ನು ಟರ್ಕಿ ಮುಚ್ಚಿರುವುದು ಉಭಯ ದೇಶಗಳ ನಡುವಿನ ವೈಮನಸ್ಯಕ್ಕೆ ಕಾರಣವಾಗಿದೆ.







