ಬುರ್ಹಾನ್ ವಾನಿ ಎನ್ ಕೌಂಟರ್ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪ್ರಶಾಂತ್ ಭೂಷಣ್

ಕಾಶ್ಮೀರದ ಭದ್ರತಾಪಡೆಗಳು ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ನಡೆಸಿರುವ ಬಗ್ಗೆ ಮಾಜಿ ಆಪ್ ನಾಯಕ ಮತ್ತು ಹಿರಿಯ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಹಳಷ್ಟು ಮಂದಿಗೆ ಈ ಹತ್ಯೆಯ ವಾಸ್ತವದ ಬಗ್ಗೆ ಸಂಶಯವಿದೆ ಎಂದೂ ಅವರು ಹೇಳಿದ್ದಾರೆ. ಅದು ನಕಲಿ ಎನ್‌ಕೌಂಟರ್ ಆಗಿರಬಹುದೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಬಹಳಷ್ಟು ಮಂದಿಗೆ ಈ ಬಗ್ಗೆ ಸಂಶಯವಿದೆ ಎಂದು ಅವರು ಹೇಳಿದ್ದಾರೆ.
ವಾನಿ ಏಕೆ ಭಯೋತ್ಪಾದಕನಾದ ಎನ್ನುವುದಕ್ಕೆ ಆತನ ಹಿನ್ನೆಲೆ ಪರೀಕ್ಷಿಸಬೇಕು ಎಂದಿದ್ದಾರೆ ಭೂಷಣ್. "ಒಂದು ಕಾಲದಲ್ಲಿ ಆತ ತನ್ನ ಹಿರಿಯ ಸಹೋದರನ ಜೊತೆಗೆ ಬೈಕಿನಲ್ಲಿ ತಿರುಗುತ್ತಿದ್ದ. ಆಗ ಭದ್ರತಾ ಪಡೆಗಳು ಅವರನ್ನು ತಡೆದು ಯಾವುದೇ ಕಾರಣವಿಲ್ಲದ ಆತನ ಸಹೋದರನನ್ನು ಹೊಡೆದಿದ್ದಾರೆ ಎನ್ನುವ ಸುದ್ದಿಗಳಿವೆ. ತನ್ನ ಸಹೋದರನನ್ನು ಭದ್ರತಾಪಡೆಗಳು ಹೀನಾಯವಾಗಿ ಹೊಡೆಯುವುದನ್ನು ನೋಡಿದ 15 ವರ್ಷದ ಬಾಲಕನ ಮನದಲ್ಲಿ ಎಂತಹ ಭಾವನೆಗಳು ಬಂದಿರಬಹುದು" ಎಂದು ಭೂಷಣ್ ಪ್ರಶ್ನಿಸಿದ್ದಾರೆ. ಕಾಶ್ಮೀರಿಗಳು ಆಝಾದಿ ಘೋಷಣೆ ಕೂಗುವುದು ಸೇನಾ ನಿಯಮ ಅವರ ಮೇಲೆ ಒತ್ತಡಪೂರ್ವಕವಾಗಿ ಹೇರಲಾಗಿದೆ ಎನ್ನುವುದನ್ನು ತೋರಿಸುತ್ತದೆ. ಅವರನ್ನು ಅನವಶ್ಯಕ ಹೊಡೆಯಲಾಗುತ್ತದೆ. ಅವರ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತದೆ ಮತ್ತು ಅಂತಹ ಹಲವು ಘಟನೆಗಳಿವೆ. ಯಾವುದೇ ದೇಶವು ತನ್ನ ಪ್ರಜೆಗಳ ಮೇಲೆ ಇಷ್ಟು ದೀರ್ಘ ಕಾಲ ಸೇನಾಡಳಿತ ಹೇರಬಾರದು. ಅದು ಮುಂದುವರಿದಲ್ಲಿ ಕೇವಲ ಭಯೋತ್ಪಾದನೆಗೆ ದಾರಿ ಮಾಡಿಕೊಡುತ್ತದೆ. ಹಲವು ದೇಶಗಳು ಇದೇ ಕಾರಣದಿಂದ ಭಯೋತ್ಪಾದನೆ ಎದುರಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ದಾದ್ರಿ ಪ್ರಕರಣದಲ್ಲಿ ಮೃತ ಮುಹಮ್ಮದ್ ಅಖ್ಲಾಕ್ ಕುಟುಂಬದ ಮೇಲೆ ಎಫ್‌ಐಆರ್ ದಾಖಲಿಸಿರುವುದು ತಪ್ಪು ಎಂದು ಹೇಳಿದ್ದಾರೆ. ಅಖ್ಲಾಕ್ ಮರಣಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಲು ತನಿಖೆ ನಡೆಯಬೇಕು. ಮಾಂಸ ಗೋವಿನದ್ದೇ ಅಥವಾ ಕುರಿಯದ್ದೇ ಎನ್ನುವುದು ಮುಖ್ಯವಲ್ಲ. ಏಕೆಂದರೆ ಗೋಮಾಂಸ ತಿನ್ನುವುದು ಉತ್ತರ ಪ್ರದೇಶದಲ್ಲಿ ಅಪರಾಧವಲ್ಲ. ವ್ಯಕ್ತಿ ಗೋವನ್ನು ಕೊಂದಾಗಲಷ್ಟೇ ಅಪರಾಧವಾಗುತ್ತದೆ ಎಂದು ಭೂಷಣ್ ಹೇಳಿದ್ದಾರೆ.
ಸ್ವರಾಜ್ ಅಭಿಯಾನದ ಸಂಯೋಜಕ ಮತ್ತು ಆಪ್ ನಾಯಕ ಯೋಗೇಂದ್ರ ಯಾದವ್ ಕೂಡ ಆರೆಸ್ಸೆಸ್ ದೇಶದಲ್ಲಿ ಕೋಮುವಾದಿ ಹಿಂಸೆಗೆ ಪ್ರಚೋದಿಸುತ್ತಿರುವುದಾಗಿ ಹೇಳಿದ್ದಾರೆ. ಉತ್ತರಪ್ರದೇಶದ 2017ರ ಚುನಾವಣೆಗೆ ಮುನ್ನ ಬಿಜೆಪಿ 2014ರ ಮುಝಫ್ಫರ್ ನಗರದಂತಹ ಕೋಮುವಾದಿ ಗಲಭೆಗೆ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ವಿವಾದಾತ್ಮಕ ಸಾಧ್ವಿ ಪ್ರಾಚಿ ಮತ್ತು ಯೋಗಿ ಆದಿತ್ಯನಾಥ್‌ರಿಗೆ ಪ್ರಧಾನಿ ಮೋದಿ ಹಿಂದಿನಿಂದ ಬೆಂಬಲಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದರು. ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ಅರುಣ್ ಜೇಟ್ಲಿ ವಿರುದ್ಧ ಮಾತನಾಡಿದರೆ ಆತನನ್ನು ಟೀಕಿಸಿದರು. ಆದರೆ ತಮ್ಮ ಪಕ್ಷದ ಸಹೋದ್ಯೋಗಿಗಳ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಏನೂ ಮಾತನಾಡಿಲ್ಲ ಎಂದು ಯಾದವ್ ಹೇಳಿದರು.
ಕೃಪೆ: www.outlookindia.com







