ಪೊಲೀಸ್ ನೇಮಕಾತಿ ಪ್ರಶ್ನೆಪತ್ರಿಕೆ ನೆಪ ಹೇಳಿ ವಂಚನೆ : ಮುಖ್ಯ ಪೊಲೀಸ್ ಪೇದೆ ಸೇರಿ ನಾಲ್ವರ ಬಂಧನ

ಬೆಂಗಳೂರು, ಜು.17: ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಮುಖ್ಯ ಪೊಲೀಸ್ ಪೇದೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಹಾಸನ ಮೂಲದ ಡಿಎಆರ್ ಮುಖ್ಯ ಪೇದೆ ಎನ್.ಗುರುಮೂರ್ತಿ ಯಾನೆ ನರಸಿಂಹಯ್ಯ(46), ತುಮಕೂರಿನ ಶಿರಾ ತಾಲೂಕಿನ ವಿನಯಗೌಡ(28),ಕೊರಟಗೆರೆಯ ನರೇಂದ್ರಬಾಬು(31) ಹಾಗೂ ಹುಣಸೂರು ತಾಲೂಕಿನ ಮಂಜುಗೌಡ(29) ಎಂದು ಗುರುತಿಸಲಾಗಿದೆ.
ಆರೋಪಿಗಳು ಒಂದು ತಿಂಗಳಿನಿಂದ ಸಿವಲ್ ಪೊಲೀಸ್ ಪೇದೆ ಹುದ್ದೆಯ ಆಕಾಂಕ್ಷಿಗಳಾಗಿರುವ ಕೆಲವು ಪರೀಕ್ಷಾರ್ಥಿಗಳನ್ನು ಸಂಪರ್ಕಿಸಿ ಅವರಿಗೆ ನೇಮಕಾತಿ ಪರೀಕ್ಷೆಯ ಮುಂಚಿತವಾಗಿ ಪ್ರಶ್ನೆಪತ್ರಿಕೆಯನ್ನು ಸರಬರಾಜು ಮಾಡುವುದಾಗಿ ನಂಬಿಸಿ ಪ್ರತಿ ಅಭ್ಯರ್ಥಿಯಿಂದ 3 ಲಕ್ಷ ರೂ. ಹಣ ವಸೂಲಿ ಮಾಡುತ್ತಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ವಿನಯ್‌ಗೌಡ ಇಲ್ಲಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್‌ಯೊಂದರಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಮುಂಗಡ ಹಣ ಪಡೆದು ಪರಾರಿಯಾಗಿ ವಂಚಿಸುವ ಹುನ್ನರಾ ಮಾಡಿರುವುದು ತಿಳಿದುಬಂದ ಬಳಿಕ ಸಿಸಿಬಿ ಪೊಲೀಸರು ಕೊಠಡಿಯ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಬಳಿಕ ಯಾವುದೇ ರೀತಿಯ ಪ್ರಶ್ನೆಪತ್ರಿಕೆ ಇಲ್ಲದಿದ್ದರೂ, ಮುಗ್ಧ ಪರೀಕ್ಷಾರ್ಥಿಗಳನ್ನು ನಂಬಿಸಿ ಅವರಿಂದ ಮುಂಗಡ ಹಣ ಪಡೆಯುತ್ತಿದ್ದರು. ಆರೋಪಿಗಳಿಂದ 6 ಮೊಬೈಲ್, 2,500 ಸಾವಿರ ರೂ. ವಶಪಡಿಸಿಕೊಂಡಿರುವ ಪೊಲೀಸರು, ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.







