ಕಲ್ಲಮುಂಡ್ಕೂರಿನಲ್ಲಿ ‘ಕೆಸರ್‌ದ ಕಂಡೊಡು ಆಟಿಡ್ ಒಂಜಿದಿನ’ ಕಾರ್ಯಕ್ರಮ

ಮೂಡುಬಿದಿರೆ, ಜು.17: ಕಲ್ಲಮುಂಡ್ಕೂರಿನ ಕಲ್ಪಸಿರಿ ಶಟಲ್ ಕ್ಲಬ್, ವ್ಯ.ಸೇ.ಸ.ಸಂಘ, ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಹಾಗೂ ಓಂಕಾರ್ ಸ್ಪೋರ್ಟ್ಸ್ ಕ್ಲಬ್‌ಗಳ ಸಹಯೋಗದಲ್ಲಿ ಕಲ್ಲಮುಂಡ್ಕೂರು ಗ್ರಾಮದ ಮಾಣಿಲ ಬಾಕಿಮಾರು ಗದ್ದೆಯಲ್ಲಿ 2ನೆ ವರ್ಷದ ಕೆಸರ್‌ದ ಕಂಡೊಡು ಆಟಿಡ್ ಒಂಜಿ ದಿನ ಕಾರ್ಯಕ್ರಮವು ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳೊಂದಿಗೆ ನಡೆಯಿತು.
ಕಲ್ಲಮುಂಡ್ಕೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ ವರದರಾಯ ಕಾಮತ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಹಿರಿಯರು ವರ್ಷಪೂರ್ತಿ ಕೃಷಿಯಲ್ಲೇ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಯುವಪೀಳಿಗೆಗೆ ಕೃಷಿ ಬೇಡವಾಗಿದೆ. ಕೃಷಿ ಪರಂಪರೆಯನ್ನು ಯುವಕರಿಗೆ ಪರಿಚಯಿಸುವ ಕಾರ್ಯಕ್ರಮ ಪ್ರತಿ ಊರುಗಳಲ್ಲಿ ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನಿಡ್ಡೋಡಿ ನಿಖಿತಾ ಟವರ್ಸ್ ಮಾಲಕ ಎಂ.ಬಿ. ಕರ್ಕೇರಾ ವಹಿಸಿ ಶುಭ ಹಾರೈಸಿದರು. ದೈಲಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಮಂಜುನಾಥ ಭಟ್ ಆಶೀರ್ವಚನಗೈದರು.
ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ವಿಜಯ ಕಾಂಚನ್ ಬೈಕಂಪಾಡಿ ಮತ್ತು ಅಕ್ಷತಾ ಪೂಜಾರಿ ಬೋಳ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ನಾಯ್ಕ, ನಿಡ್ಡೋಡಿ ಚರ್ಚ್‌ನ ಧರ್ಮಗುರು ಗ್ರೆಗೋರಿ ಸೆರಾವೊ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ಪಿಡಬ್ಲ್ಯುಡಿ ಗುತ್ತಿಗೆದಾರ ಸಂತೋಷ್ ಶೆಟ್ಟಿ, ಶ್ರೀಧರ ಶೆಟ್ಟಿ ಮಾಣಿಲ, ಉದ್ಯಮಿ ಜಯರಾಮ ಶೆಟ್ಟಿ, ಡಾ.ಮುರಳೀಧರ್, ನಿವೃತ್ತ ಅಧ್ಯಾಪಕ ಕರುಣಾಕರ ಶೆಟ್ಟಿ, ದೇವದಾಸ್ ಶೆಟ್ಟಿ,, ತುಳು ಲೇಖಕ ಉಗ್ಗಪ್ಪ ಪೂಜಾರಿ, ಸಂಘಟಕರಾದ ಜೋಕಿಂ ಕೊರೆಯ, ಗಂಗಾಧರ ಶೆಟ್ಟಿ, ಸುಖಾನಂದ ಶೆಟ್ಟಿ, ನಿಡ್ಡೋಡಿ ಲಿಟ್ಲ್ ಪ್ಲವರ್ ಚರ್ಚ್‌ನ ಉಪಾಧ್ಯಕ್ಷ ವಲೇರಿಯನ್ ಸಿಕ್ವೇರಾ, ದೇವಿದಾಸ ಶೆಟ್ಟಿ ನಿಡ್ಡೋಡಿ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಪ್ರಭಾ, ತುಳು ಲೇಖಕ ಉಗ್ಗಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಓಸ್ವಾಲ್ಡ್ ಡಿಸೋಜ ಸ್ವಾಗತಿಸಿದರು. ಪಂಚಾಯತ್ ಉಪಾಧ್ಯಕ್ಷ ಸುಂದರ ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಗುರು ಎಂ.ಪಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದಕ್ಕೂ ಮೊದಲು ಎರಡು ಜೊತೆ ಕಂಬಳದ ಕೋಣಗಳನ್ನು ಗದ್ದೆಯಲ್ಲಿ ಓಡಿಸುವ ಮೂಲಕ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆಯನ್ನು ನೀಡಲಾಯಿತು. ಮಹಿಳೆಯರು ಹಾಗೂ ಮಕ್ಕಳಿಗೆ ಲಿಂಬೆ ಚಮಚ ಓಟ, ಪುರುಷರಿಗೆ ಹಾಗೂ ಮಹಿಳೆಯರಿಗೆ 100ಮೀ ಹಾಗೂ 200ಮೀ ಓಟ, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರುಷರಿಗೆ, ಕಬಡ್ಡಿ, ಪಿರಮಿಡ್ ಮೂಲಕ ಮಡಿಕೆ ಒಡೆಯುವುದು, ವಾಲಿಬಾಲ್, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಸ್ಪರ್ಧೆ ನಡೆಯಿತು.







