ಧಾರ್ಮಿಕ ಅಜ್ಞಾನದಿಂದ ಸಾಮರಸ್ಯಕ್ಕೆ ಧಕ್ಕೆ: ಜೀವನ್‌ದಾಸ್

ಮಂಗಳೂರು, ಜು. 17: ಧಾರ್ಮಿಕ ಜ್ಞಾನದ ಕೊರತೆಯಿಂದಾಗಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟಾಗುತ್ತಿದೆ ಎಂದು ಬಜ್ಪೆ ಸಂತ ಜೋಸೆಫ್‌ರ ಪವಿಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕ ಲಯನ್ ಜೀವನ್‌ದಾಸ್ ಶೆಟ್ಟಿ ಎಂ.ಜೆ.ಎಫ್. ಅಭಿಪ್ರಾಯಪಟ್ಟಿದ್ದಾರೆ.
ಅವರು ಜಪ್ಪುವರ್ತುಲದ ಸದ್ಭಾವನಾ ವೇದಿಕೆಯ ವತಿಯಿಂದ ಮೋರ್ಗನ್ಸ್‌ಗೇಟ್‌ನ ಕಾಸ್ಸಿಯಾ ಚರ್ಚ್ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಈದ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.
ಎಲ್ಲರಿಗೂ ಒಂದೇ ಧರ್ಮ. ಆದರೆ, ಆಚಾರ ಮತ್ತು ಆರಾಧನೆಗಳು ಭಿನ್ನವಾಗಿರುತ್ತವೆ. ಮಾನವ ಮಾಡುವ ಎಲ್ಲ ಆರಾಧನೆಗಳು ಒಂದೇ ಭಗವಂತನಿಗೆ ಸಲ್ಲುತ್ತದೆ. ಆದ್ದರಿಂದ ಧರ್ಮದ ಬಗ್ಗೆ ಕೆಲವರಿಗೆ ಇರುವ ತಪ್ಪು ಗ್ರಹಿಕೆಯಿಂದಾಗಿ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಮನುಷ್ಯನಲ್ಲಿ ತಪ್ಪುಗಳು ಸಂಭವಿಸುತ್ತವೆ. ಆದರೆ, ಅದಕ್ಕೆ ಪ್ರಾಯಶ್ಚಿತ್ತಪಟ್ಟು ಆ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾದುದು ಆತನ ಧರ್ಮವಾಗಿದೆ ಎಂದು ಜೀವನ್‌ದಾಸ್ ಶೆಟ್ಟಿ ತಿಳಿಸಿದರು.
ಕುವೈಟ್‌ನ ಇಗ್ನೋ ಸೆಂಟರ್‌ನ ಉಪನ್ಯಾಸಕ ಬಿ.ಎಸ್.ಶರ್ಫುದ್ದೀನ್ ಮಾತನಾಡಿ, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರ ಸಹಿತ ವಿವಿಧ ಧರ್ಮೀಯರಿಂದ ಈ ದೇಶಕ್ಕೆ ಅಪಾರ ಕೊಡುಗೆ ಇದೆ. ಧರ್ಮದ ಹೆಸರಿನಲ್ಲಿ ಕೆಲವರು ವಿದ್ವೇಷವನ್ನು ಹರಡಿಸಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಸದ್ಭಾವನಾ ವೇದಿಕೆಯವರು ಸಮಾಜದ ಶಾಂತಿ, ಸಹಬಾಳ್ವೆಗೆ ಪ್ರಯತ್ನಿಸುವುದು ಶ್ಲಾಘನೀಯ ಎಂದರು.
ವೇದಿಕೆಯ ಸದಸ್ಯ ದೀಪಕ್ ಡಿಸೋಜ ಮಾತನಾಡಿ, ಮಾನವ ಯಾವ ಧರ್ಮೀಯನಾದರೂ ಆತ ಇತರ ಧರ್ಮವನ್ನು ಗೌರವಿಸುವಂತಾಗಬೇಕು. ಅನ್ಯಾಯ, ಅನಾಚಾರಗಳನ್ನು ಖಂಡಿಸುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಕೋಮು ದ್ವೇಷಕಾರಿ ಭಾಷಣದ ಮೂಲಕ ಸಾಮಾಜಿಕ ನೆಮ್ಮದಿಯನ್ನು ಹಾಳು ಮಾಡುವ ವ್ಯಕ್ತಿಯ ವಿರುದ್ಧ ಎಲ್ಲ ಧರ್ಮೀಯರೂ ವಿರೋಧಿಸುವಂತಾಗಬೇಕು ಎಂದರು.
ವೇದಿಕೆಯ ಅಧ್ಯಕ್ಷ ಎಂ.ಎ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.







