ಕೈರಾನ ಹಿಂದೂ ಕುಟುಂಬಗಳಿಗೆ ರಕ್ಷಣೆಗೆ ಆಗ್ರಹಿಸಿ ಧರಣಿ

ಉಡುಪಿ, ಜು.17: ಉತ್ತರಪ್ರದೇಶದ ಕೈರಾನಾದಲ್ಲಿ ನಿರಾಶ್ರಿತರಾದ ಹಿಂದೂ ಕುಟುಂಬಗಳಿಗೆ ತಕ್ಷಣ ಪುನರ್ವಸತಿ ಕಲ್ಪಿಸಿ ಪೊಲೀಸ್ ರಕ್ಷಣೆ ನೀಡಬೇಕೆಂದು ಹಿಂದು ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ರವಿವಾರ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಬೋರ್ಡ್ ಹೈಸ್ಕೂಲ್ ಎದುರು ಧರಣಿ ನಡೆಸಲಾಯಿತು.
ಉಡುಪಿ ಹಿಂದೂ ವಿಧಿಜ್ಞ ಪರಿಷತ್‌ನ ವಕ್ತಾರ ದಿನೇಶ್ ನಾಯಕ್ ಮಾತನಾಡಿ, ಸ್ವತಂತ್ರ ಭಾರತ ಹಿಂದೂಗಳ ದೇಶವಾ ಗಿದೆ. ಶೇ. 80ರಷ್ಟು ಇದ್ದು ಬಹುಸಂಖ್ಯಾತರಾಗಿರುವ ಕೈರಾನಾದಲ್ಲಿ ಕಳೆದ ಎರಡು ವರ್ಷಗಳಲ್ಲಿ 346 ಹಿಂದೂ ಕುಟುಂಬಗಳು ಪಲಾಯನಗೈದಿವೆ. ಕೇಂದ್ರ ಸರಕಾರವು ಈ ಬಗ್ಗೆ ಗಮನ ಹರಿಸಿ, ಕಠೋರ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳಾಂತರಗೊಂಡ ಹಿಂದೂ ಕುಟುಂಬಗಳಿಗೆ ಪುನರ್ವಸತಿ ವ್ಯವಸ್ಥೆ ಮಾಡಿ, ಅವರು ನಿಭರ್ಯ ವಾಗಿ ಜೀವನ ನಡೆಸುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವಿಜಯಕುಮಾರ ಮಾತನಾಡಿ, ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸನಾತನದ ವಿರುದ್ಧ ಕಾನೂನುಬಾಹಿರವಾಗಿ ಆಂದೋಲನ ಮಾಡಿ ಸಾಮಾಜಿಕ ಉದ್ವಿಗ್ನತೆಯನ್ನುಂಟು ಮಾಡುವ ಸಂಘಟನೆಗಳು ಮತ್ತು ನಾಯಕರ ವಿರುದ್ಧ ತಕ್ಷಣ ಕಠಿಣ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೆಲತ್ತೂರ್ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ರಮೇಶ ಪೆಲತ್ತೂರ್ ಮೊದಲಾದವರು ಉಪಸ್ಥಿತರಿದ್ದರು. ರಾಜೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







